ಕಲಬುರಗಿ: ಮಾಜಿ ಸಚಿವ ರೇವು ನಾಯಕ ಬೆಳಮಗಿ ಅವರಿಗೆ ಬಿಜೆಪಿ ಯಾವುದೇ ನಿಟ್ಟಿನಲ್ಲಿ ದ್ರೋಹ, ಅನ್ಯಾಯ ಮಾಡಿಲ್ಲ. ಆದರೆ ಅವರೇ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಗ್ಧಾಳಿ ನಡೆಸಿದರು.
ರವಿವಾರ ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮೂಡ ಪರ ಮಹಾಗಾಂವ ಪಟ್ಟಣದಲ್ಲಿ ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರೇವು ನಾಯಕ ಬೆಳಮಗಿ ಅವರಿಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ನಾಲ್ಕು ಸಲ ಶಾಸಕರಾಗಿದ್ದಲ್ಲದೇ ಏಳು ವರ್ಷ ಮಂತ್ರಿಯಾಗಿದ್ದರು.
ಎರಡು ಸಲ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿತ್ತು. ಇಷ್ಟಿದ್ದರೂ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣೆಗೆ ಇನ್ನೂ ನಾಲ್ಕೈದು ದಿನ ಇರುವಾಗ ಪ್ರಚಾರಕ್ಕೆ ಹೋಗದೇ ಮನೆಯಲ್ಲಿ ಕುಳಿತು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದರ ಮುಖಾಂತರ ಪಕ್ಷಕ್ಕೆ ದ್ರೋಹ ಎಸಗಿದ್ದಿರಿ. ನಿಮ್ಮಂತವರನ್ನು ಬಹಳಷ್ಟು ಜನರನ್ನು ನೋಡಿದ್ದೇನೆ ಟೀಕಾ ಪ್ರಹಾರ ನಡೆಸಿದರು.
2009ರ ಲೋಕಸಭೆ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದರೆ ಎಲ್ಲಿ ರಾಜ್ಯದಲ್ಲಿನ ಮಂತ್ರಿಗಿರಿ ಹೋಗುತ್ತದೆ ಎಂಬುದಾಗಿ ತಿಳಿದುಕೊಂಡು ಒಳಗೊಳಗೆ ಕಾಂಗ್ರೆಸ್ ಜತೆ ಕೈಜೋಡಿಸಿ ಪಕ್ಷಕ್ಕೆ ದ್ರೋಹ ಬಗೆದರಲ್ಲದೇ ಹಾಗೂ ಇತ್ತೀಚೆಗೆ ಕಲಬುರಗಿ ಗ್ರಾಮೀಣದಲ್ಲಿ ವೀರಶೈವ-ಲಿಂಗಾಯತರ ಮೇಲೆ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಕುಳಿತು ಮೊಕದ್ದಮೆ ದಾಖಲಿಸುತ್ತಿರುವುದನ್ನು ಕಂಡರೂ ಸಹ ಬೆಳಮಗಿ ನಿಮಗೆ ಟಿಕೆಟ್ ಕೊಡಬೇಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಪಕ್ಷಕ್ಕೆ ಇಷ್ಟೊಂದು ನಿಟ್ಟಿನಲ್ಲಿ ದ್ರೋಹ ಎಸಗಿದ್ದನ್ನು ಸಹಿಸಿಕೊಂಡು ಬರಲಾಗಿದ್ದರೂ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ 24 ಗಂಟೆಯೊಳಗೆ ಜೆಡಿಎಸ್ ಸೇರುತ್ತಿರಿ ಎಂದಾದರೆ ನಿಮ್ಮ ನಡಾವಳಿಕೆ ನಿರೂಪಿಸುತ್ತದೆ. ಆದ್ದರಿಂದ ಕ್ಷೇತ್ರದ ಮತದಾರರೇ ನೀವೇ ನಿರ್ಧರಿಸಿ, ಯೋಚಿಸಿ ಬಸವರಾಜ ಮತ್ತಿಮೂಡ ಅವರನ್ನು ಗೆಲ್ಲಿಸುವ ಮುಖಾಂತರ ತಕ್ಕಪಾಠ ಕಲಿಸಿ. ರೇವು ನಾಯಕ ಅವರ ಠೇವಣಿ ಕಳೆಯಿರಿ ಎಂದು ಕರೆ ನೀಡಿದರು.
ಅಭ್ಯರ್ಥಿ ಬಸವರಾಜ ಮತ್ತಿಮೂಡ ಮಾತನಾಡಿ, ಪಕ್ಷವು ಹೆಚ್ಚಿನ ವಿಶ್ವಾಸವಿಟ್ಟು ಟಿಕೆಟ್ ನೀಡಿದೆ. ಮತದಾರರು ಆಶೀರ್ವಾದ ಮಾಡಿದರೆ ಹಗಲಿರಳು ಸಮಾಜದ ಸೇವೆಗಾಗಿ ಶ್ರಮಿಸಲಾಗುವುದು. ಪ್ರಮುಖವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮದೆ ಆದ ನೀಲನಕ್ಷೆ ಹೊಂದಿರುವುದಾಗಿ ತಿಳಿಸಿದರು.
ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಮುಖಂಡರಾದ ಸುಭಾಷ ರಾಠೊಡ, ಬಸವರಾಜ ಪಾಟೀಲ, ಮಹಾಂತಗೌಡ ಪಾಟೀಲ, ಬಸವರಾಜ ಇಂಗಿನ್, ಸಿದ್ರಾಮಪ್ಪ ಮಾಲಿಬಿರಾದಾರ, ರಾಜಶೇಖರ ಡೊಂಗರಗಾಂವ, ನೀಲಕಂಠ ಚವ್ಹಾಣ ಮುಂತಾದವರಿದ್ದರು.
ರಾಜಕುಮಾರ ಕೋಟೆ ಪ್ರಾಸ್ತಾವಿಕ ಮಾತನಾಡಿದರು. ಕಲಬುರಗಿ ಗ್ರಾಮೀಣ ಘಟಕದ ಬಿಜೆಪಿ ಅಧ್ಯಕ್ಷ ಶರಣು ಸಲಗರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಅಂಬಾರಾಯ ಬೆಳಕೋಟಾ ಸೇರಿದಂತೆ ನೂರಾರು ಮುಖಂಡರು ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದರು.