ಹಾಸನ: ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ಮಾತ್ರ ನೀರು ಹರಿಸಲು ಸೂಚನೆ ನೀಡಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಹಾಸನ ಜಿಲ್ಲೆಯ ಜನರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ, ಜೆಡಿಎಸ್ ಶಾಸಕರು
ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನ ತಾಲೂಕು ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ಪೊಲೀಸರ ಕಾವಲಿನಲ್ಲಿ ನೀರು ಹರಿಸಿಕೊಳ್ಳುವ ನಿರ್ಮಾಣವಾಗಿರುವುದು ಇದೇ ಮೊದಲು. ನೀರಿಗಾಗಿ ನಾಲೆಗಳ ಮೂಲಕ ಕೆರೆಗಳಿಗೆ ನೀರು ಹರಿಸಿ ಎಂದು ಕಳೆದ 2 ತಿಂಗಳಿನಿಂದ ಹಾಸನ ಜಿಲ್ಲೆ ಶಾಸಕರು ಒತ್ತಾ ಯಿಸುತ್ತಿದ್ದರೂ ನೀರು ಬಿಡಲಿಲ್ಲ ಎಂದರು.
ಹೇಮಾವತಿ ಯೋಜನೆ ಅಚ್ಚು ಕಟ್ಟಿನ 4 ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸುವಷ್ಟು ನೀರಿನ ಸಂಗ್ರಹ ಹೇಮಾವತಿ ಜಲಾಶಯದಲ್ಲಿದೆ. ಆದರೂ, ಹಾಸನ ತಾಲೂಕು ಗೊರೂರಿನಿಂದ ತುಮಕೂರು ಜಿಲ್ಲೆಯ ಗಡಿವರೆಗಿನ ನಾಲೆಯ ಎಲ್ಲಾ ತೂಬುಗಳ ಬಳಿಯೂ ಒಟ್ಟು 55 ಪೊಲೀಸರನ್ನು ನಿಲ್ಲಿಸಿ ತುಮಕೂರು ಜಿಲ್ಲೆಗೆ ಮಾತ್ರ ನೀರು ಹರಿಸಬೇಕಾದ
ಅನಿವಾರ್ಯ ಸ್ಥಿತಿ ಏನಿದೆ?. ತುಮಕೂರು ಜಿಲ್ಲೆಯ ಜನರೂ ನಮ್ಮ ಸಹೋದರರು. ಅವರಿಗೆ ಕುಡಿವ ನೀರು ಕೊಡಲು ಹಾಸನ ಜಿಲ್ಲೆಯ ಜನರ ವಿರೋಧವಿಲ್ಲ. ಆದರೆ ಹಾಸನ, ಮಂಡ್ಯ ಜಿಲ್ಲೆಗೆ ಕುಡಿವ ನೀರು ಕೊಡದಿರುವುದು ಖಂಡನೀಯ ಎಂದರು. ಹೇಮಾವತಿ ಯೋಜನೆಯಲ್ಲಿ ತುಮಕೂರು ಜಿಲ್ಲೆಗೆ 25 ಟಿಎಂಸಿ ನೀರು ಹಂಚಿಕೆಯಾಗಿದೆ. ಅಷ್ಟು ನೀರು ಹರಿಸಲು ಹಾಸನ ಜಿಲ್ಲೆಯ ಜನ ಬಿಡುತ್ತಿಲ್ಲ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ತುಮಕೂರು ಜಿಲ್ಲೆಯಲ್ಲಿ 3.14 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವಿದ್ದರೂ ಅಲ್ಲಿ ಇನ್ನೂ ಒಂದು ಲಕ್ಷ ಎಕರೆ ಪ್ರದೇಶಕ್ಕೆ ನೀರು ಹರಿಸುವಷ್ಟೂ ನಾಲೆ ನಿರ್ಮಾಣವಾಗಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಏಕೆ ಅಲ್ಲಿ ನಾಲೆಗಳ ನಿರ್ಮಾಣ ಆಗಲಿಲ್ಲ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎ.ಟಿ. ರಾಮಸ್ವಾಮಿ, ಎಚ್.ಕೆ.ಕುಮಾ ರಸ್ವಾಮಿ, ಸಿ.ಎನ್.ಬಾಲಕೃಷ್ಣ, ಸಂಸದ ಪ್ರಜ್ವಲ್ ರೇವಣ್ಣ ಇದ್ದರು.
ನಾಲೆಯಲ್ಲಿ ನೀರು ಹರಿಯುವಾಗ ಹಾಸನ ಮತ್ತು ಮಂಡ್ಯ ಜಿಲ್ಲೆಯ ಜನರು ನೀರಿಗಾಗಿ ಗಲಾಟೆ ಮಾಡಿ ಅನಾಹುತ ಸಂಭವಿಸಿದರೆ ಹಾಸನ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ.
ಎಚ್.ಡಿ.ರೇವಣ್ಣ, ಮಾಜಿ ಸಚಿವ