ಮುಂಬಯಿ: ಒಂದು ವೇಳೆ ನಿಮಗೆ ನನ್ನ ಮೇಲೆ ಅಸಮಾಧಾನವಿದ್ದರೆ ನನ್ನ ಬೆನ್ನಿಗೆ ಬೇಕಾದರೆ ಚೂರಿ ಹಾಕಿ, ಆದರೆ ಮುಂಬಯಿ ಜನತೆಗೆ ಮಾತ್ರ ಬೆನ್ನಿಗೆ ಚೂರಿ ಹಾಕಬೇಡಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಉದ್ಧವ್ ಠಾಕ್ರೆ ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದೆ.
ಇದನ್ನೂ ಓದಿ:ಎಜ್ ಬಾಸ್ಟನ್ ಟೆಸ್ಟ್: ಟೀಂ ಇಂಡಿಯಾಗೆ ಬುಮ್ರಾ ಕ್ಯಾಪ್ಟನ್; ಟಾಸ್ ಗೆದ್ದ ಆಂಗ್ಲರು
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮುಂಬೈನ ವಿವಾದಿತ ಮೆಟ್ರೋ ಕಾರ್ ಶೆಡ್ ಯೋಜನೆಗೆ ಸಂಬಂಧಿಸಿದಂತೆ ಉದ್ದವ್ ಠಾಕ್ರೆ ಸರ್ಕಾರದ ನಿರ್ಣಯವನ್ನು ಬದಲಾಯಿಸಲು ಹೊರಟಿದ್ದರು. ಈ ಹಿನ್ನೆಲೆಯಲ್ಲಿ ಠಾಕ್ರೆ ಈ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.
ಮೆಟ್ರೋ ಕಾರ್ ಶೆಡ್ ಅನ್ನು ಆರೆ ಕಾಲೋನಿಗೆ ಸ್ಥಳಾಂತರಿಸುವ ನೂತನ ಮಹಾರಾಷ್ಟ್ರ ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸುವುದಾಗಿ ಹೇಳಿರುವ ಮಾಜಿ ಸಿಎಂ ಉದ್ಧವ್ ಠಾಕ್ರೆ, ಕಾರ್ ಶೆಡ್ ಅನ್ನು ಆರೆ ಕಾಲೋನಿಗೆ ಸ್ಥಳಾಂತರಿಸಬೇಡಿ, ಇದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಇದು ನನ್ನ ಮನವಿ ಎಂದು ತಿಳಿಸಿದ್ದಾರೆ.
2019 ರಲ್ಲಿ ಈ ಮೆಟ್ರೋ ರೈಲು ಯೋಜನೆ ಮುಂಬೈನಲ್ಲಿ ಪರಿಸರ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆಯನ್ನು ಹುಟ್ಟುಹಾಕಿತ್ತು. ಮುಂಬೈನ ಹಸಿರು ಶ್ವಾಸಕೋಶ ಎಂದು ಕರೆಯಲ್ಪಡುವ ಆರೆ ಕಾಲೋನಿಯಲ್ಲಿ ಮರಗಳನ್ನು ಕಡಿಯಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ)ಗೆ ಮುಂಬೈ ಮೆಟ್ರೋ ರೈಲು ಕಾರ್ಪೊರೇಶನ್ ಅನುಮತಿಯನ್ನು ಕೋರಿತ್ತು. ಇದರಿಂದ ಮುಂಬೈನಲ್ಲಿ ಭಾರೀ ಪ್ರತಿಭಟನೆಗಳು ನಡೆದಿತ್ತು.