Advertisement

ಆರ್ಥಿಕ ಪ್ರಗತಿಗೆ ವೀಳ್ಯ

06:00 AM Jul 16, 2018 | |

ತೋಟದಲ್ಲಿ 600 ವೀಳ್ಯದೆಲೆ ಬಳ್ಳಿಗಳನ್ನು ಹಬ್ಬಿಸಿರುವ ದೇವೇಂದ್ರಪ್ಪ, ವರ್ಷಕ್ಕೆ ಎಂಟು ಸಲ ವೀಳ್ಯದೆಲೆಯ ಕೊಯ್ಲು ಮಾಡುತ್ತಾರೆ. ಎಲ್ಲ ಖರ್ಚು ಕಳೆದರೆ, ವರ್ಷಕ್ಕೆ 8 ಲಕ್ಷಕ್ಕೂ ಹೆಚ್ಚು ಲಾಭ ಇವರ ಕೈ ಸೇರುತ್ತದೆ !

Advertisement

ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲೂಕಿನ ಸವಳಂಗ ಸಮೀಪದ ನುಗ್ಗೆಮಲ್ಲಾಪುರ ಗ್ರಾಮದಲ್ಲಿ ರೈತ ದೇವೇಂದ್ರಪ್ಪರ ನೆಮ್ಮದಿಗೆ ಕಾರಣ ವೀಳ್ಯದೆಲೆ ಬೆಳೆ. ಕಳೆದ  5-6 ವರ್ಷಗಳಿಂದ ವೀಳ್ಯ ಬೆಳೆಯುತ್ತಿರುವ ಅವರು, ಇದೀಗ  ಲಾಭದ ಹಳಿಯ ಮೇಲೆ ನಿಂತಿದ್ದಾರೆ. 

ಅವರಿಗೆ ಒಂದು ಎಕರೆ ಅಡಿಕೆ ತೋಟವಿದೆ. ಅಡಿಕೆ ಮರಗಳು 10 ವರ್ಷ ಪ್ರಾಯದ್ದಾಗಿದ್ದು ಸುಮಾರು 15 ಅಡಿಯಷ್ಟು ಎತ್ತರ ಬೆಳೆದಿವೆ. ಸಾಲಿನಿಂದ ಸಾಲಿಗೆ ಮತ್ತು ಮರದಿಂದ ಮರಕ್ಕೆ 8 ಅಡಿ ಅಂತರ ಬರುವಂತೆ ಒಟ್ಟು 600 ಅಡಿಕೆ  ಮರ ಬೆಳೆಸಿದ್ದಾರೆ. ಇವುಗಳು 4 ವರ್ಷ ಪ್ರಾಯವಾಗುತ್ತಿದ್ದಂತೆ 8 ಅಡಿ ಬೆಳೆದಿದ್ದವು.  ಪ್ರತಿ ಮರದ ಬುಡದಲ್ಲಿ ನಾಲ್ಕು ವೀಳ್ಯದೆಲೆಯ ಕಾಂಡಗಳನ್ನು ಹಬ್ಬಿಸಿದ್ದರು. ಇವರು ಹಬ್ಬಿಸಿದ ವೀಳ್ಯದೆಲೆ ಬಳ್ಳಿ ಅಣಜಿಗೊಂಡ ತಳಿಯದಾಗಿದ್ದು ಬಿಳಿ ಮಿಶ್ರಿತ ಹಸಿರು ಬಣ್ಣದಿಂದ ಕೂಡಿದೆ. ವೀಳ್ಯದೆಲೆ ಬಳ್ಳಿ ಮತ್ತು ಅಡಿಕೆ ಮರಗಳಿಗೆ ಅನುಕೂಲವಾಗುವಂತೆ ಕೊಳವೆ ಬಾವಿಯಿಂದ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. 

ಪ್ರತಿ ವರ್ಷ ಪ್ರತಿ ಅಡಿಕೆ ಮರದ ವೀಳ್ಯದೆಲೆ ಬಳ್ಳಿ ಇರುವ ಭಾಗದಲ್ಲಿ ಒಂದು ಬುಟ್ಟಿಯಷ್ಟು ಸಗಣಿ ಗೊಬ್ಬರ ಹಾಕಿ, ಮಣ್ಣು ಮುಚ್ಚುತ್ತಾರೆ. ಇದರಿಂದ ಅಡಿಕೆ ಮರ ಮತ್ತು ವೀಳ್ಯದೆಲೆ ಎರಡಕ್ಕೂ ಗೊಬ್ಬರ ದೊರೆತು ಹುಲುಸಾಗಿ ಬೆಳೆದಿದೆ. ಮುಖ್ಯ ಬೆಳೆಯಾದ ಅಡಿಕೆ ಜೊತೆ ವೀಳ್ಯದೆಲೆಯೂ ಸಹ ಉತ್ತಮವಾಗಿ ಹಬ್ಬಿರುವ ಕಾರಣ ಉಪ ಆದಾಯದ ಮೂಲ ರೂಪಿಸಿಕೊಂಡಿದ್ದಾರೆ.ಇವರ ಈ ಕೃಷಿ ಕಾರ್ಯಕ್ಕೆ ಪತ್ನಿಯ ನೆರವೂ ಇದೆ. 

ಲಾಭದ ಲೆಕ್ಕಾಚಾರ
ಇವರು ಒಟ್ಟು 600 ಅಡಿಕೆ ಮರಗಳಿಗೆ ವೀಳ್ಯದೆಲೆ ಹಬ್ಬಿಸಿದ್ದಾರೆ. ವೀಳ್ಯದೆಲೆ 45 ದಿನಕ್ಕೆ (ಒಂದೂವರೆ ತಿಂಗಳಿಗೆ ಒಮ್ಮೆ) ಕೊಯ್ಲಿಗೆ ಸಿದ್ಧಗೊಳ್ಳುತ್ತದೆ. ನುರಿತ ಎಲೆ ಬಳ್ಳಿ ಕಸುಬುದಾರ, ಯೋಗ್ಯ ಎಲೆಗಳನ್ನು ಮಾತ್ರ ಕೈ ಗಳಿಂದ ಕೀಳುತ್ತಾನೆ. 

Advertisement

ಎಳೆಯ ಮತ್ತು ಕುಡಿ ಎಲೆಗಳನ್ನು ಹಾಗೆಯೇ ಬಿಟ್ಟು ಬಲಿಯುವವರೆಗೆ ಕಾಯುತ್ತಾರೆ. ಒಂದು ಅಡಿಕೆ ಮರಕ್ಕೆ ಹಬ್ಬಿದ ವೀಳ್ಯದೆಲೆಯಿಂದ ಒಂದು ಕೊಯ್ಲಿಗೆ ಸರಾಸರಿ 800 ಎಲೆ ಸಿಗುತ್ತದೆ. 100 ವೀಳ್ಯದೆಲೆಗೆ ಒಂದು ಕಟ್ಟು.  ಅಂದರೆ ಒಂದು ಕೊಯ್ಲಿಗೆ 8 ಕಟ್ಟು ಎಲೆ ಸಿಗುತ್ತದೆ. ಕಟ್ಟಿಗೆ ಸರಾಸರಿ 25 ರೂ. ಬೆಲೆ. (ಒಮ್ಮೊಮ್ಮೆ 45 ರೂ. ದೊರೆಯುತ್ತದಾದರೂ ವರ್ಷವಿಡೀ ಸರಾಸರಿ ಲೆಕ್ಕ ರೂ.25.) ಅಂದರೆ ಒಂದು ಕೊಯ್ಲಿಗೆ ಒಂದು ಬಳ್ಳಿಯಿಂದ 200ರೂ. ಆದಾಯ ದೊರೆಯುತ್ತದೆ. 600 ವೀಳ್ಯದೆಲೆ ಬಳ್ಳಿಗಳಿಂದ ರೂ.1 ಲಕ್ಷದ 20 ಸಾವಿರ ಆದಾಯ ದೊರೆಯುತ್ತದೆ. ವರ್ಷಕ್ಕೆ 8 ಸಲ ವೀಳ್ಯದೆಲೆ ಕೊಯ್ಲು ಮಾಡಲಾಗುತ್ತದೆ. ಇದರಿಂದ ಇವರಿಗೆ ರೂ.10 ಲಕ್ಷ ಆದಾಯ ದೊರೆಯುತ್ತದೆ. ನೀರಾವರಿ ಖರ್ಚು, ಗೊಬ್ಬರ, ಕೂಲಿ ಕೆಲಸ, ವೀಳ್ಯದೆಲೆ ಕೊಯ್ಲು ,ಸಾಗಾಟ ಎಲ್ಲ ಲೆಕ್ಕ ಹಾಕಿದರೂ ಒಟ್ಟು ಒಂದೂವರೆ ಲಕ್ಷ ಖರ್ಚು. ಇದನ್ನು ತೆಗೆದರೆ ಲಾಭ ಎಂಟೂವರೆ ಲಕ್ಷ. ಜೇಬು ತುಂಬುತ್ತಿದೆ. 

ಇದನ್ನೆಲ್ಲಾ ನೋಡಿದ ಅಕ್ಕಪಕ್ಕದ ರೈತರ ಜಮೀನಿನಲ್ಲಿರುವ ಅಡಿಕೆ ಮರಗಳಲ್ಲೂ ಈಗ ವೀಳ್ಯ ಹಬ್ಬಿದೆ. 

    ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next