Advertisement

“ಬೆಸ್ಟ್‌ಫ್ರೆಂಡ್ಸ್‌’ನೀವಂದುಕೊಂಡಂಥೇನಿಲ್ಲ !

06:07 AM Jan 05, 2019 | Team Udayavani |

ಭೂಮಿಯಲ್ಲಿ ಮನುಷ್ಯನೂ ಸೇರಿದಂತೆ ಪ್ರತಿಯೊಂದು ಜೀವಿಯೂ ದೇವರ ಸೃಷ್ಠಿ. ಪ್ರತಿ ಸೃಷ್ಟಿಯಲ್ಲೂ ಒಂದೊಂದು ವಿಶಿಷ್ಟ ಗುಣವಿರುತ್ತದೆ. ಪ್ರತಿಯೊಂದಕ್ಕೂ ಬದುಕುವ ಹಕ್ಕಿರುತ್ತದೆ. ಪ್ರತಿ ಸೃಷ್ಟಿಯನ್ನೂ ಅದರದ್ದೇ ಆದ ರೀತಿಯಲ್ಲಿ ಬದುಕಲು ಬಿಡಬೇಕು. ಆದರೆ ಅದೆಲ್ಲದನ್ನು ನೋಡುವ, ಸ್ವೀಕರಿಸುವ ಸಮಾಜದ ದೃಷ್ಟಿ ವಿಶಾಲವಾಗಿರಬೇಕು. ಇಲ್ಲದಿದ್ದರೆ ನಮ್ಮ ಕಣ್ಣ ಮುಂದೆಯೇ ನಡೆಯಬಾರದ ದುರಂತಗಳು ನಡೆದು ಹೋಗುತ್ತವೆ.

Advertisement

ಇದು ಈ ವಾರ ತೆರೆಗೆ ಬಂದಿರುವ “ಬೆಸ್ಟ್‌ ಫ್ರೆಂಡ್ಸ್‌’ ಚಿತ್ರದ ಅಂತಿಮ ಸಂದೇಶ.  ದೇಶದಲ್ಲಿ ಪ್ರಸ್ತುತ ಸಲಿಂಗ ವಿವಾಹ, ಸಲಿಂಗಿಗಳ ಹಕ್ಕುಗಳು, ಈ ಕುರಿತು ನ್ಯಾಯಾಲಯಗಳ ತೀರ್ಪುಗಳು, ಸರಕಾರಗಳ ನಿಲುವುಗಳ ಬಗ್ಗೆ ಪರ-ವಿರೋಧದ ಚರ್ಚೆ, ಹೋರಾಟಗಳು ನಡೆಯುತ್ತಿರುವ ಸಂದರ್ಭದಲ್ಲೇ ಸಲಿಂಗ ಪ್ರೇಮಿಗಳು ಬದುಕು-ಭಾವನೆಗಳ ಕುರಿತ ಕಥಾಹಂದರ ಹೊಂದಿರುವ “ಬೆಸ್ಟ್‌ ಫ್ರೆಂಡ್ಸ್‌’ ಚಿತ್ರ ತೆರೆಗೆ ಬಂದಿದೆ.  

ಆಗ ತಾನೆ ಹಳ್ಳಿಯಿಂದ ಬಂದು ಪಟ್ಟಣದಲ್ಲಿ ಕಾಲೇಜ್‌ ಸೇರುವ ಆಕರ್ಷಣಾಗೆ ನಗರದ ಶ್ರೀಮಂತ ಕುಟುಂಬದಲ್ಲಿ ಬೆಳೆದ ಹುಡುಗಿ ಸೃಷ್ಟಿ ಪರಿಚಯವಾಗುತ್ತಾಳೆ. ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಈ ಸ್ನೇಹ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಹಂತಕ್ಕೆ ತಲುಪುತ್ತದೆ. ಕೊನೆಗೆ ತಮ್ಮಿಬ್ಬರ ನಡುವೆ ಬೇರೆ ಯಾರೂ ಬರಬಾರದು, ಬೇರೆ ಯಾರನ್ನೂ ತಾವು ಮದುವೆಯಾಗಬಾರದು ಎಂಬ ನಿರ್ಧಾರಕ್ಕೆ ಬರುವ ಈ ಜೋಡಿ ಪರಸ್ಪರ ಒಂದಾಗುವ ಹಂತಕ್ಕೆ ಹೋಗುತ್ತಾರೆ.

ಆದರೆ ಹೆತ್ತವರು, ಇವರ ನಿರ್ಧಾರವನ್ನು ಒಪ್ಪದೆ ಬೇರೆ ಮಾಡುತ್ತಾರೆ. ಸಮಾಜ ಇವರದ್ದು ಅಸಹಜ ಸಂಬಂಧ ಎಂಬಂತೆ ವರ್ತಿಸುತ್ತದೆ. ಅಂತಿಮವಾಗಿ ಈ ಪ್ರೇಮಿಗಳು ಏನು ಮಾಡುತ್ತಾರೆ ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್‌.  ಸಲಿಂಗ ಕಥಾಹಂದರವಿರುವ ಚಿತ್ರಗಳು ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿ ಸಾಕಷ್ಟು ಬಂದು ಹೋಗಿವೆ. ಹಿಂದಿಯಲ್ಲೂ ಕೆಲವರ್ಷಗಳ ಹಿಂದೆ “ಗರ್ಲ್ಫ್ರೆಂಡ್‌’ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬಂದು ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು.

ಕನ್ನಡದ ಮಟ್ಟಿಗೆ ಈ ಥರದ ಕಥೆಗಳು ಸಿನಿಮಾವಾಗಿರುವುದು ವಿರಳ ಎನ್ನಬಹುದು. ಆದರೆ ಈ ಎಲ್ಲಾ ಚಿತ್ರಗಳ ಕಥೆಯ ಎಳೆ ಮಾತ್ರ ಒಂದೇ ಎನ್ನುವುದರಲ್ಲಿ ಎರಡು ಮಾತಿಲ್ಲ.  ಅದೇ ಥರದ ಕಥೆ “ಬೆಸ್ಟ್‌ ಫ್ರೆಂಡ್ಸ್‌’ ಚಿತ್ರದಲ್ಲೂ ಸಿಗುತ್ತದೆ. ಚಿತ್ರದ ಕಥೆ ಕನ್ನಡ ನೇಟಿವಿಟಿಗೆ ತಕ್ಕಂತೆ ನಡೆದರೂ, ಚಿತ್ರಕಥೆ ಮತ್ತು ನಿರೂಪಣೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಇನ್ನು ಧಾರಾವಾಹಿಗಳಲ್ಲಿ ಪಾತ್ರಗಳ ಕಲಾವಿದರು ಬದಲಾದಂತೆ ಸಿನಿಮಾದಲ್ಲೂ ಮುಖ್ಯ ಕಲಾವಿದರು ಬದಲಾಗುತ್ತಾರೆ!

Advertisement

ಚಿತ್ರದ ಕಥೆಯಲ್ಲಿ ಬರುವ ಸಲಿಂಗ ಪ್ರೇಮಿಗಳ ಪಾತ್ರವನ್ನು ನಾಲ್ವರು ಕಲಾವಿದರು ನಿಭಾಯಿಸಿದರೂ, ಆ ಪಾತ್ರಗಳನ್ನು ಯಾರಿಂದಲೂ ಸಮರ್ಥವಾಗಿ ನಿಭಾಯಿಸಲಾಗದಿರುವುದು ದೃಶ್ಯಗಳಲ್ಲಿ ಕಾಣುತ್ತದೆ. ಕೆಲವೊಂದು ಸನ್ನಿವೇಶಗಳು, ಕಲಾವಿದರು ಚಿತ್ರಕ್ಕೆ ಅನಗತ್ಯವಾಗಿ ಬಳಸಿಕೊಂಡಂತೆ ಭಾಸವಾಗುತ್ತದೆ. ಚಿತ್ರದ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ನಿರ್ವಹಿಸಲು ಹೆಣಗಾಡಿದ್ದಾರೆ. ಇನ್ನು ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲದರ ಜವಾಬ್ದಾರಿಯನ್ನೂ ಹೊತ್ತಿರುವ ನಿರ್ದೇಶಕರು ಯಾವುದಕ್ಕೂ ಸರಿಯಾದ ನ್ಯಾಯ ಒದಗಿಸಿಲ್ಲ.

ಚಿತ್ರಕಥೆಯ ಎಳೆ ಅಲ್ಲಲ್ಲಿ ದಿಕ್ಕು ತಪ್ಪಿದಂತೆ ಅನುಭವವಾಗುತ್ತದೆ. ಚಿತ್ರದ ದೃಶ್ಯಗಳಾಗಲಿ, ನಿರೂಪಣೆಯಾಗಲಿ, ಸಂಭಾಷಣೆ ಅಥವಾ ಹಾಡುಗಳಾಗಲಿ ಯಾವುದೂ ಪ್ರೇಕ್ಷಕರ ಮನಸ್ಸಿನಲ್ಲಿ ಹೆಚ್ಚು ಹೊತ್ತು ಉಳಿಯುವುದಿಲ್ಲ. ಇನ್ನು ಚಿತ್ರದ ಛಾಯಾಗ್ರಹಣ, ಸಂಗೀತ, ಹಿನ್ನೆಲೆ ಸಂಗೀತದ ಗುಣಮಟ್ಟ ಕೂಡ ಚಿತ್ರದ ಕಥೆಗೆ ಹಿನ್ನಡೆಯನ್ನು ಉಂಟು ಮಾಡಿದೆ. ಪ್ರಸ್ತುತ ಸಮಾಜದಲ್ಲಿ ಬಹು ಚರ್ಚಿತ ಸೂಕ್ಷ್ಮ ವಿಷಯವನ್ನು ಕನ್ನಡದಲ್ಲಿ ಸಿನಿಮಾವಾಗಿ ಹೇಗೆ ತೋರಿಸಿದ್ದಾರೆ ಎಂಬ ಕುತೂಹಲವಿದ್ದರೆ “ಬೆಸ್ಟ್‌ ಫ್ರೆಂಡ್ಸ್‌’ ನೋಡಬಹುದು. 

ಚಿತ್ರ: ಬೆಸ್ಟ್‌ ಫ್ರೆಂಡ್ಸ್‌ 
ನಿರ್ಮಾಣ: ಲಯನ್‌ ಎಸ್‌. ವೆಂಕಟೇಶ್‌
ನಿರ್ದೇಶನ: ಟೇಶಿ ವೆಂಕಟೇಶ್‌
ತಾರಾಗಣ: ಮೇಘನಾ, ದ್ರಾವ್ಯ ಶೆಟ್ಟಿ, ಆಶಾ, ಸುಮತಿ ಪಾಟೀಲ್‌ ಮತ್ತಿತರರು.

* ಜಿ.ಎಸ್‌.ಕೆ ಸುಧನ್‌  

Advertisement

Udayavani is now on Telegram. Click here to join our channel and stay updated with the latest news.

Next