Advertisement

Modi: ಪ್ರಧಾನಿ ಮೋದಿಗೆ ಶುಭಾಶಯಗಳ ಮಹಾಪೂರ- ಬಿಜೆಪಿಯಿಂದ ದೇಶಾದ್ಯಂತ ಸೇವಾ ಕಾರ್ಯಗಳು

09:26 PM Sep 17, 2023 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 73ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ಅವರಿಗೆ ಸಹಸ್ರ ಸಂಖ್ಯೆಯಲ್ಲಿ ಶುಭಾಶಯಗಳು ಹರಿದುಬಂದಿವೆ.

Advertisement

ಮೋದಿ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಭಾನುವಾರದಿಂದ ಅ.2ರವರೆಗೆ ದೇಶಾದ್ಯಂತ “ಸೇವಾ ಪಖ್ವಾರಾ’ ಹಮ್ಮಿಕೊಂಡಿದೆ. ಅ.2ರಂದು ಗಾಂಧಿ ಜಯಂತಿ ಕೂಡ ಇದ್ದು, ಇದರ ಅಂಗವಾಗಿ ಸಮಾಜದ ವಿವಿಧ ಸ್ತರಗಳ ಜನರಿಗೆ ತಲುಪುವ ನಿಟ್ಟಿನಲ್ಲಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿದೆ.

“ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. “ಅಮೃತ ಕಾಲ’ದ ಈ ಸಮಯದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ದೂರದೃಷ್ಟಿ ಮತ್ತು ದೃಢವಾದ ನಾಯಕತ್ವದಿಂದ ಪ್ರತಿಯೊಂದು ಕ್ಷೇತ್ರದಲ್ಲಿ ದೇಶವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಿ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭ ಹಾರೈಸಿದ್ದಾರೆ.

“ಪ್ರಧಾನಿ ಮೋದಿ ಅವರು ನವಭಾರತದ ಶಿಲ್ಪಿ. ದೇಶದ ಪ್ರಾಚೀನ ಪರಂಪರೆಯ ಆಧಾರದ ಮೇಲೆ ಭವ್ಯ ಮತ್ತು ಸ್ವಾವಲಂಬಿ ಭಾರತಕ್ಕೆ ಅವರು ಭದ್ರ ಅಡಿಪಾಯ ಹಾಕಿದ್ದಾರೆ. ತಮ್ಮ ದೂರದೃಷ್ಟಿ, ಕಠಿಣ ಪರಿಶ್ರಮ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಕೋಟ್ಯಂತರ ಭಾರತೀಯರ ಜೀವನದಲ್ಲಿ ಸಮೃದ್ಧಿ ಮತ್ತು ವಿಶ್ವಾಸವನ್ನು ತಂದಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶ್ಲಾಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೂಡ ಟ್ವೀಟ್‌(ಎಕ್ಸ್‌) ಮೂಲಕ ಶುಭಾಶಯ ಕೋರಿದ್ದಾರೆ. ನಟರಾದ ಶಾರುಖ್‌ ಖಾನ್‌, ಅಕ್ಷಯ್‌ ಕುಮಾರ್‌, ಸಲ್ಮಾನ್‌ ಖಾನ್‌, ಮೋಹನ್‌ ಲಾಲ್‌, ಕಮಲ್‌ ಹಾಸನ್‌, ಮಮ್ಮುಟ್ಟಿ, ಸನ್ನಿ ಡಿಯೋಲ್‌, ಸುನೀಲ್‌ ಶೆಟ್ಟಿ, ರಿತೇಶ್‌ ದೇಶ್‌ಮುಖ್‌, ನಟಿಯರಾದ ಹೇಮಾ ಮಾಲಿನಿ, ಕಂಗನಾ, ಗಾಯಕ ಶಾನ್‌, ನಿರ್ದೇಶಕ ರಾಕೇಶ್‌ ರೋಶನ್‌ ಸೇರಿ ವಿವಿಧ ಕ್ಷೇತ್ರಗಳ ಗಣ್ಯರಿಂದಲೂ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

Advertisement

ಮರಳಿನಲ್ಲಿ ಅರಳಿದ ಮೋದಿ:
ಖ್ಯಾತ ಮರಳುಶಿಲ್ಪಿ ಸುದರ್ಶನ್‌ ಪಟ್ನಾಯಕ್‌ ಅವರು ಮರಳಿನಲ್ಲಿ ಅದ್ಭುತವಾಗಿ ಚಿತ್ರಿಸುವ ಮೂಲಕ ಪ್ರಧಾನಿ ಮೋದಿ ಅವರಿಗೆ ಶುಭ ಕೋರಿದ್ದಾರೆ. ಒಡಿಶಾದ ಪುರಿ ಬೀಚ್‌ನಲ್ಲಿ 50 ಕೊನಾರ್ಕ್‌ ಚಕ್ರಗಳ ಮೂಲಕ “ಮೋದಿ ಅವರಿಗೆ ಭಗವಂತ ವಿಶ್ವಕರ್ಮ ದೀರ್ಘ‌ ಮತ್ತು ಆರೋಗ್ಯಯುತ ಜೀವನ ಕಲ್ಪಿಸಲಿ’ ಎಂದು ಹಾರೈಸಿದ್ದಾರೆ.

ಮುಸ್ಲಿಂ ಮಹಿಳೆಯರಿಂದ ಸಂಭ್ರಮಾಚರಣೆ:
ವಾರಾಣಸಿಯಲ್ಲಿ ಮುಸ್ಲಿಂ ಮಹಿಳಾ ಫೌಂಡೇಶನ್‌ಗೆ ಸೇರಿದ ಮಹಿಳೆಯರು 73 ದೀಪಗಳನ್ನು ಹಚ್ಚಿ, ಆರತಿ ಬೆಳಗಿ, ವಿವಿಧ ರಂಗೋಲಿಗಳನ್ನು ಹಾಕಿ, ಜನರಿಗೆ ಲಡ್ಡುಗಳನ್ನು ಹಂಚಿ ಪ್ರಧಾನಿ ಮೋದಿ ಅವರ ಜನ್ಮದಿನ ಆಚರಿಸಿದರು. ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

ಕೇಕ್‌ ಕತ್ತರಿಸಿ ಆಚರಣೆ:
ಭಾರತಕ್ಕೆ ಅಕ್ರಮವಾಗಿ ಬಂದಿರುವ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್‌, ಕೇಕ್‌ ಕತ್ತರಿಸುವ ಮೂಲಕ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ ಆಚರಿಸಿದ್ದಾರೆ. “ಹಿಂದೂಸ್ತಾನ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ಮೋದಿ ಅವರಿಗೆ ರಾಖೀಯನ್ನು ಉಡುಗೊರೆಯಾಗಿ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next