ಉಡುಪಿ: ವ್ಯಕ್ತಿಯಂತೆ ರಾಷ್ಟ್ರದ ಬದುಕಿನಲ್ಲೂ ಉತ್ಕೃಷ್ಟ ಕಾಲ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಜಗತ್ತು ಭಾರತವನ್ನು ನೋಡುವ ದೃಷ್ಟಿ ಬದಲಾಗಿದೆ. ಮುಂದಿನ ಚುನಾವಣೆ ದೇಶ ಹಾಗೂ ಪಕ್ಷಕ್ಕೆ ಮಹತ್ವವಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ನಗರದ ಶಾರದಾ ಇಂಟರ್‌ನ್ಯಾಶನಲ್ ಹೊಟೇಲ್‌ನಲ್ಲಿ ಬುಧವಾರ ನಡೆದ ಮಂಗಳೂರು ವಿಭಾಗದ ಪುರ ಸಭೆ, ಪಟ್ಟಣ ಪಂಚಾಯತ್ ಸದಸ್ಯರ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲೂ ವಿಶೇಷ ಗುಣ ವಿರುತ್ತದೆ. ಅದರಿಂದ ಸಮಾಜ, ದೇಶ, ಜಗತ್ತಿಗೆ ಉಪಯೋಗ ಆಗುವಂತೆ ಮಾಡಿದರೆ ಯಶಸ್ಸಿನ ಜತೆಗೆ ಸಾಧಕರಾಗುತ್ತೇವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಪ್ರಶಿಕ್ಷಣ ನಮ್ಮ ಸಂಘಟನೆಯ ಒಂದು ಭಾಗವಾಗಿದೆ. ಕಾರ್ಯಕರ್ತರು ಅಪ್‌ಡೇಟ್ ಆಗುತ್ತಿದ್ದಾರೆ. ಸಂಸದರಿಗೂ ಪ್ರಶಿಕ್ಷಣ ನಡೆಯುತ್ತದೆ. ಪಕ್ಷದ ಶಿಸ್ತು, ಕಾರ್ಯ ಬದ್ಧತೆ ಅರಿಯಲು ಪ್ರಶಿಕ್ಷಣ ಅಗತ್ಯ. ಪ್ರತಿನಿಧಿಯು ಜಾತಿಗೆ ಸೀಮಿತವಾಗಬಾರದು. ಗೆದ್ದ ಅನಂತರದಲ್ಲಿ ಕಾರ್ಯಕರ್ತರನ್ನು ಮರೆಯಬಾರದು ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್, ಪ್ರಶಿಕ್ಷಣ ಪ್ರಕೋಷ್ಠದ ರಾಜ್ಯ ಸಂಚಾಲಕ ಶ್ರೀಕಾಂತ್ ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯೆ ಡಾ| ಮಂಜುಳಾ ರಾವ್, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಉಪಸ್ಥಿತರಿದ್ದರು.
ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ರಘುವೀರ ಶೆಣೈ ಸ್ವಾಗತಿಸಿ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ವಂದಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರು ನಿರೂಪಿಸಿದರು.