Advertisement

ಬೆಳಪು ವಿದ್ಯುತ್‌ ವ್ಯತ್ಯಯಕ್ಕೆ ಮದ್ದು ಬೇಕು, ಸಂಪರ್ಕ ರಸ್ತೆಗಳ ಅಭಿವೃದ್ಧಿ ಆಗಬೇಕು

12:48 PM Sep 12, 2022 | Team Udayavani |

ಈ ಹಿಂದಿನ ಕೈಗಾರಿಕೆ ಪ್ರದೇಶಗಳಿಗೆ ಹೋಲಿಸಿದರೆ ಬೆಳಪು ಪ್ರದೇಶ ಇತ್ತೀಚಿನದ್ದೆನ್ನಬಹುದು. ಪ್ರದೇಶದಲ್ಲಿ ಉದ್ಯಮಗಳಿಗೆ ನಿವೇಶನಗಳು ಹಂಚಿಕೆಯಾದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭವಾಗಿಲ್ಲ. ಆದರೆ ಈಗಲೂ ಸಂಪರ್ಕ ರಸ್ತೆ ಅಭಿವೃದ್ಧಿಯಂಥ ಮೂಲ ಸಮಸ್ಯೆ ಈಡೇರಬೇಕಿದೆ. ವಿದ್ಯುತ್‌ ವ್ಯತ್ಯಯಕ್ಕೂ ಕಡಿವಾಣ ಹಾಕಿದರೆ ಉದ್ಯಮಗಳಿಗೆ ಅನುಕೂಲ.

Advertisement

ಉಡುಪಿ: ಕಾಪು ತಾಲೂಕಿನಲ್ಲಿರುವ ಬೆಳಪು ಕೈಗಾರಿಕೆ ಪ್ರದೇಶವು ವಿಶಾಲ ಸಮತಟ್ಟಾದ ಪ್ರವೇಶವನ್ನು ಹೊಂದಿದ್ದರೂ ಪೂರ್ಣ ಪ್ರಮಾಣದಲ್ಲಿ ಕೈಗಾರಿಕೆಗಳು ಇನ್ನೂ ಆರಂಭವಾಗಬೇಕಿದೆ.
2014ರಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಸುಮಾರು 68 ಎಕ್ರೆ ಪ್ರದೇಶದಲ್ಲಿ 64 ನಿವೇಶನಗಳನ್ನು ಅಭಿವೃದ್ಧಿಪಡಿಸಿ 60 ಹಂಚಲಾಗಿದೆ. ಈ ಪೈಕಿ ಪೂರ್ಣ ಪ್ರಮಾಣದ ಕೈಗಾರಿಕೆ ಸ್ಥಾಪನೆಯಾಗಿರುವುದು ಕೆಲವೇ ಮಾತ್ರ.

ಈ ಪ್ರದೇಶ ಇತ್ತೀಚಿನದ್ದು (ಎಂಟು ವರ್ಷಗಳಷ್ಟು ಹಳೆಯದು. ಉಳಿದವುಗಳ ಪೈಕಿ ಬಹುತೇಕ ಎರಡು ಮೂರು ದಶಕಗ ಳಿಗಿಂತ ಹಳೆಯವು). ಹಾಗಾಗಿ ಏನೋ ಒಳಗಿನ ರಸ್ತೆಗಳು ಚೆನ್ನಾಗಿವೆ. ವಿಚಿತ್ರವೆಂದರೆ, ಕೈಗಾರಿಕೆ ಪ್ರದೇಶವನ್ನು ಸಂಪರ್ಕಿಸುವ ಒಂದೇ ಒಂದು ರಸ್ತೆಯೂ ಕೈಗಾರಿಕೆಗಳಿಗೆ ಬೇಕಾದ ವಾಹನ ಸಂಚಾರಕ್ಕೆ ಪೂರಕವಾಗಿಲ್ಲ. ಅದೇ ದೊಡ್ಡ ಸಮಸ್ಯೆ.

ಈ ಪ್ರದೇಶಕ್ಕೆ ಕಾಪು-ಮಲ್ಲಾರು- ಬೆಳಪು ರಸ್ತೆ, ಉಚ್ಚಿಲ- ಪಣಿಯಾಡಿ- ಬೆಳಪು ರಸ್ತೆ, ಮೂಳೂರು- ಬೆಳಪು ರಸ್ತೆ, ಎಲ್ಲೂರು- ಪಣಿಯಾಡಿ-ಬೆಳಪು ರಸ್ತೆ, ಶಿರ್ವ- ಮಲ್ಲಾರು- ಬೆಳಪು ಮಾರ್ಗದ ಮೂಲಕವೂ ಪ್ರವೇಶ ಮಾಡಬಹುದು. ಆದರೆ ಈ ಯಾವ ಸಂಪರ್ಕ ರಸ್ತೆಯೂ ಯೋಗ್ಯವಾಗಿಲ್ಲ. ದೊಡ್ಡ ಗ್ರಾತದ ಒಂದು ವಾಹನ ಹೋಗುವುದೇ ಕಷ್ಟ; ಇರುವ ರಸ್ತೆಯಲ್ಲೂ ಹಲವಾರು ಗುಂಡಿಗಳು. ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಮೀನು ಒತ್ತುವರಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದರೂ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ ಎಂಬುದು ಉದ್ಯಮಿಗಳ ಬೇಸರದ ಮಾತು.

ನಿಲ್ದಾಣವಿದ್ದರೂ ರೈಲು ನಿಲ್ಲದು!
ಕೈಗಾರಿಕೆ ಪ್ರದೇಶದ ಕೂಗಳತೆ ದೂರದಲ್ಲಿ ಬೆಳಪು ರೈಲು ನಿಲ್ದಾಣವಿದೆ. ಆದರೆ ಇಲ್ಲಿ ಲೋಕಲ್‌ ರೈಲು ಬಿಟ್ಟು ಬೇರ್ಯಾವುದೇ ರೈಲು ನಿಲ್ಲುವುದಿಲ್ಲ. ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ರೈಲು ನಿಲ್ದಾಣ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಬೇಕಿದೆ. ಹಾಗೆಯೇ ಮತ್ಸéಗಂಧ, ಪಂಚಗಂಗಾ ಎಕ್ಸ್‌ ಪ್ರಸ್‌ ರೈಲುಗಳು ಇಲ್ಲಿ ನಿಲ್ಲುವಂತಾಗಬೇಕು. ಆಗ ಕೈಗಾರಿಕೆಗಳಿಗೂ ಅನುಕೂಲವಾಗಲಿದೆ.

Advertisement

ವಿದ್ಯುತ್‌ ಸಮಸ್ಯೆ
ಕೈಗಾರಿಕೆ ಪ್ರದೇಶಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಭೂಗರ್ಭದಲ್ಲಿ ವಿದ್ಯುತ್‌ ತಂತಿ ಅಳವಡಿಸಿದ್ದರೂ ಕಳಪೆ ಗುಣಮಟ್ಟದ ವಿದ್ಯುತ್‌ ತಂತಿಗಳನ್ನು ಬಳಸಿರುವ ಆಪಾದನೆ ಇದೆ. ಇದರಿಂದ ಪದೇಪದೆ ವಿದ್ಯುತ್‌ ವ್ಯತ್ಯಯವಾಗುತ್ತಿರುತ್ತದೆ. ನಿರ್ವಹಣೆಯೂ ಸಮರ್ಪಕವಾಗಿಲ್ಲ. ನಿರಂತರ ವಿದ್ಯುತ್‌ ಪೂರೈಕೆ ಇದ್ದರಷ್ಟೇ ಕೈಗಾರಿಕೆಗಳು ನಡೆಯಲಿಕ್ಕೆ ಅನುಕೂಲ. ಈ ಬಗ್ಗೆ ದೂರು ನೀಡಲಾಗಿದೆ. ಬೀದಿ ದೀಪಗಳಂತೂ ಬೆಳಗುವುದೇ ಅಪರೂಪ. ವಿದ್ಯುತ್‌ ಉಪಕೇಂದ್ರವೊಂದು ಆರಂಭವಾಗುತ್ತಿದೆ. ಅದಾದ ಬಳಿಕವಾದರೂ ವಿದ್ಯುತ್‌ ವ್ಯತ್ಯಯ ಸಮಸ್ಯೆ ಬಗೆಹರಿದೀತೆ ಎಂದು ಕಾದುನೋಡಬೇಕಿದೆ ಎನ್ನುತ್ತಾರೆ ಕೈಗಾರಿಕೋದ್ಯಮಿಗಳು.

ಸಮರ್ಪಕ ಚರಂಡಿ ಇಲ್ಲ
ಕೈಗಾರಿಕೆ ಪ್ರದೇಶ ಇತ್ತೀಚಿನ ವರ್ಷದಲ್ಲಿ ಅಭಿವೃದ್ಧಿಪಡಿಸಿದ್ದರೂ ಸಮರ್ಪಕವಾದ ಚರಂಡಿ ವ್ಯವಸ್ಥೆ ಮಾಡಿಲ್ಲ. ವೆಟ್‌ವೆಲ್‌ ವ್ಯವಸ್ಥೆಯೂ ಇಲ್ಲ. ಕೊಳಚೆ ನೀರು ಸಮೀಪದ ಗದ್ದೆಗಳಿಗೆ ಹೋಗುವ ಸಾಧ್ಯತೆಯೂ ಇದೆ. ಸದ್ಯ ಕೈಗಾರಿಕೆಗಳ ಸಂಖ್ಯೆ ಕಡಿಮೆ ಇರುವುದರಿಂದ ಸಮಸ್ಯೆಯ ತೀವ್ರತೆ ಇನ್ನೂ ಅರಿವಿಗೆ ಬಂದಿಲ್ಲ. ಪೂರ್ಣ ಪ್ರಮಾಣದಲ್ಲಿ ಕೈಗಾರಿಕೆಗಳು ಆರಂಭವಾದಲ್ಲಿ ಕೊಳಚೆ ನೀರು ನಿರ್ವಹಣೆಯೂ ದೊಡ್ಡ ಸವಾಲಾಗಲಿದೆ.

ಪರಿಸರ ಸ್ನೇಹಿ ಕೈಗಾರಿಕೆ ಬರಲಿ
ಕೈಗಾರಿಕೆ ಪ್ರದೇಶವನ್ನು ಅಭಿವೃದ್ಧಿಪಡಿಸಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳದ್ದು. ಹಾಗೆಯೇ ಪರಿಸರ ಸ್ನೇಹಿ ಕೈಗಾರಿಕೆಗಳಿಗೆ ಆದ್ಯತೆ ನೀಡದಿದ್ದರೆ ಸುತ್ತಲಿನ ಕೃಷಿಕರಿಗೆ, ನೈಸರ್ಗಿಕ ಸಂಪತ್ತಿಗೆ ತೊಂದರೆಯಾಗಲಿದೆ. ಕೈಗಾರಿಕಾ ತ್ಯಾಜ್ಯವನ್ನು ಕೃಷಿ ಭೂಮಿಗಳಿಗೂ ಬಿಡುವ ಅಪಾಯವಿರುತ್ತದೆ. ಇದು ಸರಿಯಲ್ಲ. ಹಾಗಾಗಿ ಪರಿಸರ ಸ್ನೇಹಿ ಕೈಗಾರಿಕೆಗಳೇ ಸ್ಥಾಪನೆಯಾಗಬೇಕು ಎಂಬುದು ಸ್ಥಳೀಯರ ಆಗ್ರಹ.

ಸದ್ಯ ನಮ್ಮ ಕೈಗಾರಿಕೆ ಪ್ರದೇಶದಲ್ಲಿ ಪೂರ್ಣ
ಪ್ರಮಾಣದಲ್ಲಿ ಉದ್ಯಮಗಳು ಬಾರದ ಕಾರಣ ಸಮಸ್ಯೆಗಳ ಗಂಭೀರ ಸ್ವರೂಪ ತಿಳಿಯುತ್ತಿಲ್ಲ. ಆದರೂ ವಿದ್ಯುತ್‌ ವ್ಯತ್ಯಯದಿಂದ ತೀವ್ರ ಸಮಸ್ಯೆಯಾಗುತ್ತಿದೆ. ಬೀದಿ ದೀಪಗಳು ಸರಿಯಲ್ಲ. ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಲೇ ಬೇಕು. ಇಲ್ಲವಾದರೆ ಕೈಗಾರಿಕೆಗಳನ್ನು ನಡೆಸುವುದು ಕಷ್ಟವಾಗಲಿದೆ.
– ಕೆ. ನಟರಾಜ ಹೆಗ್ಡೆ, ಮಾಲಕರು, ಆಕ್ಸಿಜನ್‌ ಪ್ಲಾಂಟ್‌

Advertisement

Udayavani is now on Telegram. Click here to join our channel and stay updated with the latest news.

Next