Advertisement

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

12:23 PM May 05, 2024 | Team Udayavani |

ಬೆಂಗಳೂರು: ಶುಕ್ರವಾರ ಸುರಿದ ಬಿರುಗಾಳಿ ಮಳೆಗೆ ಹಲವೆಡೆ ವಿದ್ಯುತ್‌ ಕಂಬಗಳ ಮೇಲೆ ಮರಗಳು ಉರುಳಿಬಿದ್ದಿದು, ಜತೆಗೆ ಟ್ರಾನ್ಸ್‌ಫಾರ್ಮರ್‌ಗಳಿಗೂ ಹಾನಿ ಉಂಟಾಗಿದೆ. ಹೀಗಾಗಿ ಬೆಸ್ಕಾಂಗೆ ಸುಮಾರು 1.18 ಕೋಟಿ ರೂ. ನಷ್ಟವಾಗಿದೆ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಶುಕ್ರವಾರ ಮಧ್ಯಾಹ್ನ ಸುರಿದ ವರುಣಾರ್ಭಟಕ್ಕೆ ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 305 ವಿದ್ಯುತ್‌ ಕಂಬಗಳು ಧರೆಗುರುಳಿದ್ದು, 57 ವಿದ್ಯುತ್‌ ಪರಿವರ್ತಕಗಳು (ಟೀಸಿ) ಹಾನಿಗೊಳಗಾಗಿವೆ. ಭಾರೀ ಗಾಳಿ- ಮಳೆಗೆ ವಿದ್ಯುತ್‌ ಮೂಲಸೌಕರ್ಯ ಹಾನಿಗೊಂಡಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಅಂದಾಜು 305 ವಿದ್ಯುತ್‌ ಕಂಬಗಳು ಧರೆಗುರುಳಿದ್ದರಿಂದ 25.62 ಲಕ್ಷ ರೂ. ನಷ್ಟವಾಗಿದೆ. ಜತೆಗೆ ಟೀಸಿಗಳು ಹಾನಿಗೊಳಗಾಗಿದ್ದರಿಂದ 86.20 ಲಕ್ಷ ರೂ. ನಷ್ಟವಾಗಿದೆ ಮತ್ತು 18 ಡಬಲ್‌ ಪೋಲ್‌ ಸ್ಟ್ರಕ್ಚರ್‌ಗಳು ಹಾನಿಯಾಗಿದ್ದು, 6.67 ಲಕ್ಷ ರೂ. ನಷ್ಟವಾಗಿದೆ. ಒಟ್ಟಾರೆಯಾಗಿ ಗುರುವಾರ ಸುರಿದ ಮಳೆಗೆ ಬೆಸ್ಕಾಂಗೆ 1.18 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬೆಸ್ಕಾಂ ಅಭಿಯಂತರರು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ದುರಸ್ತಿ ಕಾರ್ಯ ನಡೆಸಲಾಗಿದೆ. ಬಹುತೇಕ ಕಡೆಗಳಲ್ಲಿ ವಿದ್ಯುತ್‌ ಪೂರೈಕೆ ಪುನಾರಂಭಗೊಂಡಿದೆ ಎಂದು ತಿಳಿಸಿದ್ದಾರೆ. ಕೆಲ ಪ್ರದೇಶದಲ್ಲಿ ಭಾರೀ ಗಾಳಿಗೆ ವಿದ್ಯುತ್‌ ಕಂಬಗಳ ಮೇಲೆ ಬಿದ್ದಿರುವ ಮರ ಹಾಗೂ ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಮುರಿದಿರುವ ಕಂಬಗಳ ಬದಲಾವಣೆ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next