Advertisement

ಸರ್ಕಾರಿ ಬಸ್‌ ಅಪಘಾತವಾದ್ರೆ ಬರ್ತಾರೆ ಮಿತ್ರರು

08:21 AM Nov 04, 2017 | Team Udayavani |

ಬೆಂಗಳೂರು: ಸರ್ಕಾರಿ ಬಸ್‌ಗಳು ಅಪಘಾತಕ್ಕೀಡಾದಾಗ, ತ್ವರಿತವಾಗಿ ಘಟನಾ ಸ್ಥಳಕ್ಕೆ ತೆರಳಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆಯೊಂದಿಗೆ ಆಸ್ಪತ್ರೆಗೆ ಸಾಗಿಸಲು ಕೆಎಸ್‌ಆರ್‌ಟಿಸಿಯು ಶುಕ್ರವಾರ “ಬಸ್‌ಮಿತ್ರ’ ಸೇವೆಗೆ ಚಾಲನೆ ನೀಡಿತು. 

Advertisement

ಪ್ರಸ್ತುತ ನಿಗಮದ ಅಪಘಾತ ಪ್ರಮಾಣ ಪ್ರತಿ ಲಕ್ಷ ಕಿ.ಮೀ.ಗೆ 0.10ರಷ್ಟಿದ್ದು, ಈ ಅಪಘಾತಗಳಲ್ಲಿ ಸಾವು-ನೋವುಗಳ ಪ್ರಮಾಣವನ್ನು ಇನ್ನಷ್ಟು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ನೂತನ “ಬಸ್‌ ಮಿತ್ರ’ ವಾಹನಗಳನ್ನು ಪರಿಚಯಿಸಲಾಗಿದೆ. ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಇಲ್ಲಿನ ಶಾಂತಿನಗರದ ಡಿಪೋ-4ರಲ್ಲಿ ಈ ವಾಹನಗಳ ಸೇವೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಸಚಿವ ರೇವಣ್ಣ, ಕೆಎಸ್‌ಆರ್‌ಟಿಸಿ ಬಸ್‌ ಅಪಘಾತದ ವೇಳೆ ಸಿಬ್ಬಂದಿ ಸ್ಥಳಕ್ಕೆ ತೆರಳಲು ಅಗತ್ಯ ವಾಹನ ಸೌಲಭ್ಯ ಇಲ್ಲದೆ ತೊಂದರೆ ಆಗುತ್ತಿತ್ತು. “ಬಸ್‌ ಮಿತ್ರ’ ವಾಹನಗಳು ಆ ಕೊರತೆ ನೀಗಿಸಲಿವೆ. ಸಿಬ್ಬಂದಿಯು ಸ್ಥಳಕ್ಕೆ ತ್ವರಿತವಾಗಿ ಭೇಟಿ ನೀಡಿ, ಆ್ಯಂಬುಲೆನ್ಸ್ ಬರುವವರೆಗೂ ಗಾಯಾಳುಗಳನ್ನು ರಕ್ಷಿಸಲು ಹಾಗೂ ಸಮೀಪದ ಆಸ್ಪತ್ರೆಗೆ ಸಾಗಿಸಲು ಸಹಕಾರಿಯಾಗಲಿವೆ ಎಂದರು.

ಇದಕ್ಕಾಗಿ 3.52 ಕೋಟಿ ರೂ. ವೆಚ್ಚದಲ್ಲಿ 45 ವಾಹನಗಳನ್ನು ಖರೀದಿಸಿದ್ದು, ಅವುಗಳನ್ನು 16 ವಿಭಾಗಗಳಿಗೆ ನಿಯೋಜಿಸಲಾಗಿದೆ. ಗೋಲ್ಡನ್‌ ಅವರ್‌ ಆರ್ಗನೈಸೇಶನ್‌ ಮತ್ತು ರೆಡ್‌ ಕ್ರಾಸ್‌ ಸಂಸ್ಥೆ ಇದಕ್ಕೆ ಕೈಜೋಡಿಸಿವೆ. ಪ್ರಾಥಮಿಕ ಚಿಕಿತ್ಸೆ ನೀಡುವ ಬಗ್ಗೆ ಚಾಲಕರಿಗೆ ರೆಡ್‌ಕ್ರಾಸ್‌ ಸಂಸ್ಥೆ ತರಬೇತಿ ನೀಡಲಿದೆ. ಕೆಎಸ್‌ಆರ್‌ಟಿಸಿ ಸಹಾಯವಾಣಿ ಬಳಸಿ ಅಪಘಾತದ ಮಾಹಿತಿ ನೀಡಿ, ತುರ್ತು ಸೇವೆ ಪಡೆಯಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕೆಎಸ್‌ ಆರ್‌ಟಿಸಿ ಅಧ್ಯಕ್ಷ ಗೋಪಾಲ್‌ ಪೂಜಾರಿ, ವ್ಯವಸ್ಥಾಪಕ
ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌, ಬಿಎಂಟಿಸಿ ಅಧ್ಯಕ್ಷ ನಾಗರಾಜ (ಯಾದವ) ಮತ್ತಿತರರು ಉಪಸ್ಥಿತರಿದ್ದರು. 

ಖಾಸಗಿ ಬಸ್‌ ಟಿಕೆಟ್‌ ಆನ್‌ಲೈನ್‌ ಬುಕಿಂಗ್‌ ರದ್ದು  ಕೇವಲ ವದಂತಿ
ಬೆಂಗಳೂರು: ಖಾಸಗಿ ಬಸ್‌ಗಳ ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ವ್ಯವಸ್ಥೆ ರದ್ದುಗೊಳಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿರುವ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ, ಇದು ಕೇವಲ ವದಂತಿ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಬಸ್‌ಗಳ ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ರದ್ದುಗೊಳಿಸಲಾಗುತ್ತದೆ ಎನ್ನುವುದು ಕೇವಲ ವದಂತಿ. ಅಂತಹ ಯಾವುದೇ ಚಿಂತನೆ ಸರ್ಕಾರದ ಮುಂದಿಲ್ಲ. ಸ್ಟೇಟ್‌ ಕ್ಯಾರೇಜ್‌ ಬಳಸುವವರು ಆನ್‌ಲೈನ್‌ ಬುಕಿಂಗ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದ್ದೆ ಅಷ್ಟೇ. ಖಾಸಗಿ ವಾಹನ ಹಿತಾಸಕ್ತಿಯೂ ನಮಗೆ ಮುಖ್ಯ. ಹಾಗಂತಾ ಅದಕ್ಕಾಗಿ ಸರ್ಕಾರದ ಸಾರಿಗೆ ಸಂಸ್ಥೆಯ ಹಿತ ಬಲಿಕೊಡುವುದಿಲ್ಲ ಎಂದು ಹೇಳಿದರು.

ದರ ಕಡಿಮೆ ಮಾಡಲು ಪ್ರಯತ್ನ: ನ್ಯಾಯಾಲಯದ ಆದೇಶದಂತೆ ಸ್ಪೀಡ್‌ ಗವರ್ನರ್‌ ಕಡ್ಡಾಯಗೊಳಿಸಲಾಗಿದೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ, ಇಲ್ಲಿ ದುಬಾರಿ ಎನ್ನುವ ಆರೋಪ ಕೇಳಿಬಂದಿದ್ದು, ರಾಜ್ಯದಲ್ಲಿಯೂ ದರ ಕಡಿಮೆಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು. ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ ಬಗ್ಗೆ ಪ್ರಶ್ನಿಸಿದಾಗ, ಪ್ರತಿಭಟನಾಕಾರರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಒಂದೇ ದಿನದಲ್ಲಿ ಪರಿಹಾರಕ್ಕೆ ಪಟ್ಟು ಹಿಡಿಯುವುದು ಸರಿ ಅಲ್ಲ. ನಾನೂ ಹೋರಾಟದಿಂದ ಬಂದಿದ್ದೇನೆ. ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next