ಹುಬ್ಬಳ್ಳಿ: ನಮ್ಮ ಭಾವನೆಗಳಿಗೆ ತಕ್ಕಂತೆ ಭಗವಂತ ಸ್ಪಂದಿಸುತ್ತಾನೆ ಎಂದು ತೋರಿಸಿಕೊಟ್ಟಿದ್ದೇ ರಾಮಾಯಣ ಎಂದು ಉಡುಪಿ ಪಲಿಮಾರುಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು. ಶ್ರೀ ಕೃಷ್ಣ ಕಲ್ಯಾಣಮಂಟಪದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಗುರುವಾರ ರಾಮಾಯಣದ ಪ್ರವಚನ ನೀಡಿದರು.
ದಶರಥ ಮಕ್ಕಳು ಬೇಕೆಂದು ದೇವರಲ್ಲಿ ಬೇಡಿಕೊಂಡ. ಅದೇ ರೀತಿ ಜಗವನ್ನು ಉದ್ಧರಿಸಲು ಅವತರಿಸು ಎಂದು ಭುವಿಯ ಜನರೆಲ್ಲ ಭಗವಂತನನ್ನು ಬೇಡಿಕೊಂಡರು. ಇದೇ ಸಂದರ್ಭದಲ್ಲಿ ರಾವಣನ ಕಾಟ ಮಿತಿ ಮೀರಿದ್ದು, ಅವನ ತೊಂದರೆಯಿಂದ ಮುಕ್ತಿ ನೀಡಬೇಕೆಂದು ದೇವತೆಗಳೆಲ್ಲ ಕೇಳಿಕೊಂಡರು.
ಆಗ ಭಗವಂತ ಜನ್ಮ ಪಡೆದ. ರಾಮನಾಗಿ ಹುಟ್ಟಿದ ಎಂದು ವಾಲ್ಮೀಕಿ ರಾಮಾಯಣದಲ್ಲಿ ಬರೆದಿದ್ದಾರೆ ಎಂದರು. ನಾವು ಪ್ರತಿನಿತ್ಯ ಅಶ್ವಮೇಧಯಾಗ ಮಾಡಿದರೆ ನಮ್ಮ ಜೀವನ ಪಾವನವಾಗುತ್ತದೆ. ಇಂದ್ರಿಯಗಳ ಮೇಲಿನ ನಿಯಂತ್ರಣವೇ ಅಶ್ವಮೇಧಯಾಗ. ಇಂದ್ರಿಯಗಳನ್ನು ಭಗವಂತ ನೀಡಿದ್ದೆಂದುಕೊಂಡು ಬದುಕಬೇಕು.
ಆಗ ಭಗವಂತ ನಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ಎಂದರು. ರಾಮನ ಬಲವನ್ನು ಬಿಂಬಿಸುವುದೇ ಬಾಲಕಾಂಡ. ಬಾಲ ಕಾಂಡದಲ್ಲಿ ಕೇವಲ ರಾಮನ ಬಾಲ್ಯದೊಂದಿಗೆ ರಾಮನ ಸಾಮರ್ಥ್ಯವನ್ನೂ ಚಿತ್ರಿಸಲಾಗಿದೆ. ರಾಮಭೂಮಿಗೆ ಬಂದಿದ್ದು ಪ್ರಾರಬ್ಧವಲ್ಲ, ಎಲ್ಲರ ಸೌಭಾಗ್ಯ.
ಎಲ್ಲರನ್ನು ಅನುಗ್ರಹಿಸಲು ಭಗವಂತ ಭೂಮಿಗೆ ಬಂದ ಎಂದರು. ರಾಮಾಯಣದಲ್ಲಿ 7 ಕಾಂಡಗಳಿವೆ. ಒಂದು ಕಾಂಡದ ಮರ ನೂರಾರು ವರ್ಷ ಬದುಕುತ್ತದೆ. 7 ಕಾಂಡದ ರಾಮಾಯಣ ಲಕ್ಷಾಂತರ ವರ್ಷಗಳವರೆಗೂ ನಿರಾತಂಕವಾಗಿ ಬದುಕುತ್ತದೆ ಎಂದರು. ವೈದ್ಯಕೀಯ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತ ತಯಾರು ಮಾಡಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ.
ರಕ್ತ ಉತ್ಪಾದನೆ ಮಾಡುವುದು ಭಗವಂತನಿಂದ ಮಾತ್ರ ಸಾಧ್ಯ. ಬ್ಲಿಡ್ ಬ್ಯಾಂಕ್‌ಗಳನ್ನು ಮಾಡಬಹುದೇ ಹೊರತು ಬ್ಲಿಡ್ ಫ್ಯಾಕ್ಟರಿಗಳನ್ನು ಮಾಡುವುದು ಸಾಧ್ಯವಾಗಿಲ್ಲ. ಇದು ಭಗವಂತನ ವಿಶೇಷತೆ ಎಂದರು. ಮಾನವರು ಮಾಂಸ-ಖಂಡ ಬೆಳೆಸಲು ಮಾಂಸ ತಿನ್ನಬೇಕಿಲ್ಲ. ಮನುಷ್ಯ ಮೂಲತಃ ಸಸ್ಯಾಹಾರಿ.
ಸಸ್ಯಾಹಾರಿಗಳಿಗಿದ್ದಂತೆ ನಮಗೆ ಹಲ್ಲು, ದೇಹ ರಚನೆಯಿದೆ. ರಕ್ತ, ಮಾಂಸ ನೀಡಿಯೇ ಭಗವಂತ ನಮ್ಮನ್ನು ಕಳಿಸಿರುತ್ತಾನೆ. ಸಿಂಹ ಮಾಂಸಾಹಾರಿಯಾಗಿದ್ದರೂ, ಸಸ್ಯಾಹಾರಿಯಾಗಿರುವ ಆನೆ ಸಿಂಹಕ್ಕಿಂತ ಬಲಿಷ್ಠವಾದುದು ಎಂದರು. ಒಬ್ಬ ಹಿಂದೂ ಹೇಳಿದ್ದನ್ನು ಇನ್ನೊಬ್ಬ ಕೇಳುವುದಿಲ್ಲ. ನಮ್ಮಲ್ಲಿ ಒಗ್ಗಟ್ಟು ಇರದಿದ್ದರಿಂದ ನಮಗೆ ಇಂಥ ಸ್ಥಿತಿ ಬಂದೊದಗಿದೆ ಎಂದರು.