ಆತ ಅಪ್ಪಟ ಹಳ್ಳಿಯ ಹುಡುಗ. ಪ್ರಾಣಕ್ಕೆ ಪ್ರಾಣವಾಗಿರುವ ತಂಗಿ, ಜೀವದ ಗೆಳೆಯ, ಮಮತೆಯ ತಾಯಿ ಇಷ್ಟೇ ಅವನ ಪ್ರಪಂಚ. ತಾನಾಯಿತು, ತನ್ನ ಪ್ರಪಂಚವಾಯಿತು ಅಂದುಕೊಂಡಿರುವ ಈ ಹುಡುಗನ ತಂಟೆಗೆ ಯಾರಾದರೂ ಬಂದರೆ, ಅವನು ಅಕ್ಷರಶಃ “ಬೆಂಕಿ’. ವೈರಿಗಳಿಗೆ “ಬೆಂಕಿ’ಯಂತೆ ಕಾಣುವ, ಊರಿನವರಿಂದ “ಬೆಂಕಿ’ ಅಂತಲೇ ಕರೆಸಿಕೊಳ್ಳುವ ಹುಡುಗ. ಇಂಥ “ಬೆಂಕಿ’ಯ ಜೀವನದಲ್ಲಿ ಅನಿರೀಕ್ಷಿತವಾಗಿ ನಡೆಯುವ ಕೆಲವು ಘಟನೆಗಳು, ಅದಕ್ಕೆ ಕಾರಣರಾದವರು “ಬೆಂಕಿ’ಯ ಕೆನ್ನಾಲಿಗೆಯಲ್ಲಿ ಹೇಗೆ ದಹಿಸಿ ಹೋಗುತ್ತಾರೆ ಅನ್ನೋದೇ “ಬೆಂಕಿ’ ಸಿನಿಮಾದ ಕಥಾಹಂದರ.
ಸಿನಿಮಾದ ಹೆಸರೇ ಹೇಳುವಂತೆ “ಬೆಂಕಿ’ ಔಟ್ ಆ್ಯಂಡ್ ಔಟ್ ಮಾಸ್ ಎಂಟರ್ ಟೈನ್ಮೆಂಟ್ ಸಿನಿಮಾ. ಭರ್ಜರಿ ಆ್ಯಕ್ಷನ್, ಅಣ್ಣ-ತಂಗಿ ಸೆಂಟಿಮೆಂಟ್, ಜೊತೆಗೊಂದು ಲವ್ ಟ್ರ್ಯಾಕ್, ಮಸ್ತ್ ಡ್ಯಾನ್ಸ್ ಎಲ್ಲವನ್ನೂ ಇಟ್ಟುಕೊಂಡು “ಬೆಂಕಿ’ಯನ್ನು ತೆರೆಮೇಲೆ ಕಟ್ಟಿಕೊಡಲಾಗಿದೆ. ಸಿನಿಮಾದ ಕಥಾಹಂದರ ಮಾಸ್ ಆಡಿಯನ್ಸ್‌ಗೆ ಇಷ್ಟವಾಗುವಂತಿದೆ. ಅದನ್ನು ಪರಿಣಾಮಕಾರಿಯಾಗಿ ತೆರೆಮೇಲೆ ಹೇಳುವ ಮತ್ತಷ್ಟು ಸಾಧ್ಯತೆ ನಿರ್ದೇಶಕರಿಗಿತ್ತು.
ಇನ್ನು ಸಿನಿಮಾದಲ್ಲಿ “ಬೆಂಕಿ’ಯಾಗಿ ಅನೀಶ್ ಫೈಟ್ಸ್, ಡ್ಯಾನ್ಸ್, ಡೈಲಾಗ್ಸ್ ಎಲ್ಲದರಲ್ಲೂ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಂಡು ಮಾಸ್ ಆಡಿಯನ್ಸ್ ಗಮನ ಸೆಳೆಯುತ್ತಾರೆ. ಸಂಪದ ಹುಲಿವಾನ, ಶ್ರುತಿ ಪಾಟೀಲ್, ಉಗ್ರಂ ಮಂಜು, ಅಚ್ಯುತ ಕುಮಾರ್, ಸಂಪತ್, ಹರಿಣಿ, ಚಂದ್ರಕೀರ್ತಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಛಾಯಾಗ್ರಹಣ ಸುಂದರವಾಗಿ ದೃಶ್ಯಗಳನ್ನು ತೆರೆಮೇಲೆ ಕಟ್ಟಿಕೊಟ್ಟಿದೆ. ಸಂಕಲನ ಕಾರ್ಯ, ಹಿನ್ನೆಲೆ ಸಂಗೀತ ಮತ್ತು ಕಲರಿಂಗ್ ಕಾರ್ಯಗಳ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು. ಸಿನಿಮಾದ ಒಂದೆರಡು ಹಾಡುಗಳು ಥಿಯೇಟರ್ ಹೊರಗೂ ಗುನುಗುವಂತಿದೆ.
ಒಟ್ಟಾರೆ ಬಹಳ ದಿನಗಳ ನಂತರ ಕನ್ನಡದಲ್ಲಿ ಆ್ಯಕ್ಷನ್ ಜೊತೆ ಜೊತೆಯಲ್ಲೇ ಅಣ್ಣ-ತಂಗಿ ಸೆಂಟಿಮೆಂಟ್ ಕಥಾಹಂದರ ಕೂಡ ತೆರೆಮೇಲೆ ಬಂದಿದ್ದು, ಆ್ಯಕ್ಷನ್ ಜೊತೆಗೆ ಸೆಂಟಿಮೆಂಟ್ ಇಷ್ಟಪಡುವ ಸಿನಿಪ್ರಿಯರು ಒಮ್ಮೆ “ಬೆಂಕಿ’ ನೋಡಲು ಅಡ್ಡಿಯಿಲ್ಲ.
ಕಾರ್ತಿಕ್