ಬೆಂಗಳೂರು: ಕೋವಿಡ್ ಮೂರನೇ ಅಲೆ ನಿಯಂತ್ರಣ ನಿಟ್ಟಿನಲ್ಲಿ ಪ್ರಕರಣಗಳು ಹೆಚ್ಚಾದರೆ ಬೆಂಗಳೂರಿನಲ್ಲಿಯೂ ವಾರಾಂತ್ಯ ಲಾಕ್‌ಡೌನ್ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣ ಕುರಿತು ಸಭೆ ನಡೆಸಿದ ನಂತರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸೋಂಕಿತರ ಮನೆಗೆ ವೈದ್ಯರ ನಡಿಗೆ ಕಾರ್ಯಕ್ರಮ ಆಗಸ್ಟ್ 16 ರಿಂದ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಸರ್ಕಾರಿ ಹಾಗೂ ಖಾಸಗಿ ವೈದ್ಯರು ಪ್ರತಿ ಮನೆಗೆ ಭೇಟಿ ನೀಡಿ ಸೋಂಕಿತರಿದ್ದರೆ ಸೂಕ್ತ ಮುನ್ನಚ್ಚರಿಕೆ ನೀಡಲಿದ್ದಾರೆ. ರೋಗ ಲಕ್ಷಣ ಇದ್ದರೆ ಔಷಧ ಹಾಗೂ ಚಿಕಿತ್ಸೆ ಕುರಿತು ಸಲಹೆ ನೀಡಲಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ರಾತ್ರಿ ಕರ್ಫ್ಯೂ ಮುಂದುವರಿದಿದ್ದು ವಾಣಿಜ್ಯ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ವಾರಾಂತ್ಯ ಲಾಕ್‌ಡೌನ್ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಾರಾಂತ್ಯ ಲಾಕ್‌ಡೌನ್ ನಮ್ಮ ಕಡೆಯ ಅಸ್ತ್ರ. ಆದರೆ, ಆ ಪರಿಸ್ಥಿತಿ ನಿರ್ಮಾಣವಾಗದಂತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಳು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ವಾಣಿಜ್ಯ ಮಳಿಗೆಯ ಎಲ್ಲ ವ್ಯಾಪಾರಿಗಳು ಮಾಲೀಕರು ನೌಕರರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯ.ಇಲ್ಲದಿದ್ದರೆ ಲೈಸೆನ್ಸ್ ನವೀಕರಣ ಮಾಡುವುದಿಲ್ಲ ಎಂದು ಹೇಳಿದರು.