Advertisement

ರಾಜ್ಯದಲ್ಲಿ ಆಸ್ತಿತ್ವಕ್ಕೆ ಬರಲಿದೆ ಆವಿಷ್ಕಾರ ಪ್ರಾಧಿಕಾರ

06:10 AM Nov 30, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುವ ಆವಿಷ್ಕಾರಗಳನ್ನು ಪ್ರೋತ್ಸಾಹಿಸಲು ಶೀಘ್ರದಲ್ಲೇ ಪ್ರತ್ಯೇಕ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ.

Advertisement

ಸ್ಟಾರ್ಟ್‌ಅಪ್‌ಗ್ಳನ್ನು ಆರಂಭಿಸಲು ಇರುವ ಕಾನೂನು ತೊಡಕುಗಳ ನಿವಾರಣೆ ಹಾಗೂ ತಂತ್ರಜ್ಞಾನಗಳಲ್ಲಿನ ಆವಿಷ್ಕಾರಗಳನ್ನು ಪ್ರೋತ್ಸಾಹಿಸಲು “ಕರ್ನಾಟಕ ಆವಿಷ್ಕಾರ ಪ್ರಾಧಿಕಾರ’ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸ್ವತಃ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ. ಅಷ್ಟೇ ಅಲ್ಲ, ಆ ಆವಿಷ್ಕಾರಗಳ ರಕ್ಷಣೆಗೆ ಕಾನೂನಾತ್ಮಕ ಚೌಕಟ್ಟು ರೂಪಿಸಲು ಉದ್ದೇಶಿಸಲಾಗಿದೆ.

ಸ್ವತಃ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇದನ್ನು ಪ್ರಕಟಿಸಿದರು. ನಗರದ ಅರಮನೆಯಲ್ಲಿ ಗುರುವಾರ ಆರಂಭಗೊಂಡ 21ನೇ ಆವೃತ್ತಿಯ “ಬೆಂಗಳೂರು ಟೆಕ್‌ ಸಮಿಟ್‌’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಡಿಜಿಟಲ್‌ ಇಂಡಿಯಾ ನಿರ್ಮಾಣದ ನಾಯಕತ್ವವನ್ನು ಕರ್ನಾಟಕವೇ ವಹಿಸಬೇಕು ಎಂಬ ಉದ್ದೇಶ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿನ ಹೊಸ ಆಲೋಚನೆಗಳು, ಆವಿಷ್ಕಾರಗಳನ್ನು ವಾಣಿಜ್ಯೀಕರಣಗೊಳಿಸುವಲ್ಲಿ ಕಾನೂನಾತ್ಮಕ ತೊಡಕುಗಳಿರುವುದು ಸರ್ಕಾರದ ಗಮನದಲ್ಲಿದೆ. ಆದ್ದರಿಂದ ಶಾಸನಬದ್ಧವಾದ “ಆವಿಷ್ಕಾರ ಪ್ರಾಧಿಕಾರ’ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಐಟಿ-ಬಿಟಿ ಹಾಗೂ ಸಂಬಂಧಿಸಿದ ಕ್ಷೇತ್ರಗಳಿಂದ ಬೆಂಗಳೂರು ಒಂದರಲ್ಲೇ ಒಂದು ದಶಲಕ್ಷ ಜನರಿಗೆ ನೇರವಾಗಿ ಮತ್ತು ಮೂರು ದಶಲಕ್ಷ ಜನರಿಗೆ ಪರೋಕ್ಷವಾಗಿ ಉದ್ಯೋಗ ದೊರೆಕಿದೆ. ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳು ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಶೇ. 65ರಷ್ಟು  ಜಿಐಸಿ (ಗ್ಲೋಬಲ್‌ ಇನ್‌-ಹೌಸ್‌ ಸೆಂಟರ್‌)ಗಳನ್ನು ಹೊಂದಿದೆ. 

Advertisement

ಅದರಲ್ಲಿ ಶೇ. 35ರಷ್ಟು ಬೆಂಗಳೂರಿನಲ್ಲೇ ಇವೆ. ಅಷ್ಟೇ ಅಲ್ಲ, ಐಟಿ-ಬಿಟಿಗೆ ಸಂಬಂಧಿಸಿದಂತೆ ದೇಶದಲ್ಲಿ 21.5 ದಶಲಕ್ಷ ಚದರಡಿ ಕಚೇರಿ ಜಾಗಗಳ ಪೈಕಿ ಬೆಂಗಳೂರಿನಲ್ಲೇ ಶೆ. 30ರಷ್ಟಿದೆ. ಇದು ಸಿಲಿಕಾನ್‌ ಸಿಟಿಯಲ್ಲಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಇರುವ ಪೂರಕ ವಾತಾವರಣಕ್ಕೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಿದರು.

33 ಕಾಲೇಜುಗಳಲ್ಲಿ ಇನ್‌ಕುÂಬೇಷನ್‌ ಸೆಂಟರ್‌ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ. ಜಾರ್ಜ್‌ ಮಾತನಾಡಿ, ರಾಜ್ಯದ 33 ಕಾಲೇಜುಗಳಲ್ಲಿ ಇನ್‌ಕುÂಬೇಷನ್‌ ಸೆಂಟರ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಪೈಕಿ ಮೊದಲ ಹಂತದಲ್ಲಿ 9 ಕಾಲೇಜುಗಳು, ಎರಡು ಮತ್ತು ಮೂರನೇ ಹಂತಗಳಲ್ಲಿ ಕ್ರಮವಾಗಿ 10 ಹಾಗೂ 14 ಕಾಲೇಜುಗಳಲ್ಲಿ ಈ ಕೇಂದ್ರಗಳು ತಲೆಯೆತ್ತಲಿವೆ. ಇದಲ್ಲದೆ, ಸೆಂಟರ್‌ ಆಫ್ ಎಕ್ಸಿಲನ್ಸ್‌ ಕೂಡ ನಿರ್ಮಿಸಲಾಗುತ್ತಿದೆ. ಆವಿಷ್ಕಾರಗಳು ನಮ್ಮ ಆರ್ಥಿಕತೆಯ ಆಧಾರ ಸ್ತಂಭ ಎಂದು ಬಣ್ಣಿಸಿದರು.

ಕೌಶಲ್ಯಾಭಿವೃದ್ಧಿ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ, ದಿನದಿಂದ ದಿನಕ್ಕೆ ತಂತ್ರಜ್ಞಾನ ಕ್ಷೇತ್ರ ಬೆಳೆಯುತ್ತಿದೆ. ಹೂಡಿಕೆ ಪ್ರಮಾಣವೂ ಹೆಚ್ಚಿದೆ. ಆದರೆ, ಬೆನ್ನಲ್ಲೇ ಉದ್ಯೋಗಾವಕಾಶಗಳು ಇಳಿಮುಖವಾಗುತ್ತಿವೆ. ಈ ಅಂತರವನ್ನು ತಗ್ಗಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ 2019ರಲ್ಲಿ ಬೃಹತ್‌ ಕೌಶಲ್ಯ ಮೇಳ ಆಯೋಜಿಸಲಾಗುತ್ತಿದೆ. ಈ ಮೂಲಕ ಸ್ವಯಂ ಉದ್ಯೋಗ ಅಥವಾ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಲು ಕೌಶಲ್ಯ ತರಬೇತಿ ಅವಶ್ಯಕತೆ ಇದೆ ಎಂದು ಹೇಳಿದರು.

ಬಯೋಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಮಾತನಾಡಿ, ದೇಶಾದ್ಯಂತ ಸುಮಾರು 2 ಸಾವಿರ ಬಯೋಟೆಕ್‌ ಸ್ಟಾರ್ಟ್‌ಅಪ್‌ಗ್ಳಿದ್ದು, ಇದರಲ್ಲಿ 600 ಬೆಂಗಳೂರಿನಲ್ಲೇ ಇವೆ. ಕಳೆದ ಕೇವಲ ಒಂದು ವರ್ಷದಲ್ಲಿ ಮೂರು ಬಿಲಿಯನ್‌ ಡಾಲರ್‌ನಷ್ಟು ಈ ಬಯೋಟೆಕ್ನಾಲಜಿಯಲ್ಲಿ ಹೂಡಿಕೆಯಾಗಿದೆ. ದೇಶದ ಆರ್ಥಿಕತೆಯಲ್ಲಿ ಈ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಸಚಿವ ಪ್ರಿಯಾಂಕ ಖರ್ಗೆ, ಆಸ್ಟ್ರೇಲಿಯದ ಆವಿಷ್ಕಾರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಚಿವೆ ಕೇಟ್‌ ಜೋನ್ಸ್‌, ಸಾಫ್ಟ್ವೇರ್‌ ಪಾರ್ಕ್ಸ್ ಆಫ್ ಇಂಡಿಯಾ ಮಹಾನಿರ್ದೇಶಕ ಡಾ.ಓಂಕಾರ ರೈ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ಕರ್ನಾಟಕ ವಿಜನ್‌ ಗ್ರೂಪ್‌ ಆನ್‌ ಐಟಿ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌,  ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next