ಬೆಂಗಳೂರು: ನಗ್ನ ಫೋಟೋ ಕಳುಹಿಸುವಂತೆ ಪೀಡಿಸುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ಬಸವನಗುಡಿ ಠಾಣೆ ಪೊಲೀಸ್ ಪಿಎಸ್ಐ ರಾಜ ಕುಮಾರ್ ಸದಾಶಿವ ಜೋಡಟ್ಟಿ ವಿರುದ್ಧ ಪೊಲೀಸ್ ಕಮಿಷನರ್ ಬಿ.ದಯಾ ನಂದಗೆ ಖಾಸಗಿ ಆಸ್ಪತ್ರೆ ವೈದ್ಯೆಯ ಸಹೋದರ ನೀಡಿದ್ದಾನೆ.
2021ರಲ್ಲಿ ಫೇಸ್ಬುಕ್ ಮೂಲಕ ಪಿಎಸ್ಐಗೆ ಯುವತಿ ಪರಿಚಯ ವಾಗಿದೆ. ಈ ವೇಳೆ ಯುವತಿ ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದರು. ಮೈಸೂರಿನಲ್ಲಿ ಅದೇ ವರ್ಷ ಪೊಲೀಸ್ ಅಕಾಡೆಮಿಯಲ್ಲಿ ಪಿಎಸ್ಐ ತರಬೇತಿಯಲ್ಲಿದ್ದರು. ಈ ವೇಳೆ ಸ್ನೇಹ ಬೆಳೆದು ಆಪ್ತರಾಗಿದ್ದರು ಎನ್ನಲಾಗಿದೆ.
ಯುವತಿ ಎಂಬಿಬಿಎಸ್ ಮಾಡುವಾಗ ಪಿಎಸ್ಐನಿಂದ 80 ಸಾವಿರ ಪಡೆದು ನಂತರ ಹಿಂದಿರುಗಿಸಿದ್ದಾರೆ. ನಂತರ ಪಿಎಸ್ಐ ಕೂಡ ವೈದ್ಯೆಯಿಂದ ಹಂತ ಹಂತವಾಗಿ 1.71 ಲಕ್ಷ ರೂ. ಅನ್ನು ಆನ್ಲೈನ್ ಮೂಲಕ ಪಡೆದಿದ್ದಾರೆ. ಯುವತಿ ಆ ಹಣವನ್ನು ವಾಪಸ್ ಕೇಳಿದ್ದಾಗ ನಿನಗೆ ಹಣ ವಾಪಸ್ ಕೊಡುವುದಿಲ್ಲ ಏನು ಮಾಡಿಕೊಳ್ಳುತ್ತೀಯಾ ಮಾಡಿಕೊ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ನಿನಗೆ ಹಣ ಬೇಕಾದರೆ ಠಾಣೆಗೆ ಬಂದು ತೆಗೆದುಕೊಂಡು ಹೋಗು ಎಂದು ಬೆದರಿಕೆ ಹಾಕಿದ್ದಾರೆ. ಅದರಿಂದ ಮನನೊಂದ ಯುವತಿ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೇಳಿಕೆ ದಾಖಲು: ಇನ್ನು ಪಿಎಸ್ಐ ಇತ್ತೀಚೆಗೆ ನಗ್ನ ಫೋಟೋ ಕಳಿಸುವಂತೆ ವೈದ್ಯಗೆ ಕಿರುಕುಳ ನೀಡಿದ್ದು, ಇದನ್ನು ನಿರಾಕರಿಸಿದ ವೈದ್ಯೆಗೆ ನಿಂದಿಸಿದ್ದಾರೆ. ವೈದ್ಯೆಯ ಕಾಲ್ ರೆಕಾರ್ಡ್ ತೆಗೆದು ಕಿರುಕುಳ ನೀಡುತ್ತಿರುವ ಆರೋಪ ಮಾಡಲಾಗಿದೆ. ಹೀಗಾಗಿ ಸದ್ಯ ನೊಂದ ವೈದ್ಯೆ ಸಹೋದರನ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹನುಮಂತನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತೆ ಸಹೋದರ, ದೂರುದಾರನನ್ನು ಠಾಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.