ಹೊಸದಿಲ್ಲಿ: ಇತ್ತೀಚೆಗೆ ಪುಣೆಯಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಆಗಮಿಸಿದ್ದ ನಂದನ್ ಕುಮಾರ್ ಎಂಬ ಪ್ರಯಾಣಿಕರೊಬ್ಬರ ಲಗೇಜ್ ಬ್ಯಾಗ್, ಅದೇ ವಿಮಾನದಲ್ಲಿ ಪ್ರಯಾಣಿಸಿದ್ದ ಬೇರೊಬ್ಬ ಪ್ರಯಾಣಿಕರ ಕೈ ಸೇರಿತ್ತು. ಮನೆಗೆ ಬಂದ ಮೇಲೆ ಇದನ್ನು ಮನಗಂಡ ಕುಮಾರ್, ಇಂಡಿಗೋ ಕಸ್ಟಮರ್ ಕೇರ್ ಸಿಬಂದಿಯ ಸಹಾಯದಿಂದ ಪುನಃ ವಾಪಸ್ ಪಡೆಯಲು ಪ್ರಯತ್ನಿಸಿದ್ದರು. ಅದು ಫಲ ನೀಡಲಿಲ್ಲ. ಪ್ರಯತ್ನ ಬಿಡದ ಅವರು, ತಮ್ಮಲ್ಲಿನ ತಾಂತ್ರಿಕ ನಿಪುಣತೆಯಿಂದ ಲಗೇಜನ್ನು ಹಿಂಪಡೆದಿದ್ದಾರೆ.
ಕುಮಾರ್ ಹಾಗೂ ಸಹ ಪ್ರಯಾಣಿಕರ ಬ್ಯಾಗ್‌ಗಳು ಒಂದೇ ರೀತಿ ಕಾಣುತ್ತಿದ್ದರಿಂದ ಅವು ಅದಲು ಬದಲಾಗಿದ್ದವು. ಕಸ್ಟಮರ್ ಕೇರ್ ಸಿಬಂದಿಯ ಆಶ್ವಾಸನೆ ಹುಸಿಯಾಯಿತು.
ಹೇಗಾಯ್ತು ಪತ್ತೆ?: ತಮ್ಮ ಬಳಿಯಿದ್ದ ಸಹ ಪ್ರಯಾಣಿಕನ ಬ್ಯಾಗ್‌ನ ಮೇಲೆ ನಮೂದಾಗಿದ್ದ ಪಿಎನ್‌ಆರ್ ಸಂಖ್ಯೆ ಬಳಸಿಕೊಂಡು ಇಂಡಿಗೋ ವೆಬ್‌ಸೈಟ್‌ನಲ್ಲಿ ಆತನ ಬಗ್ಗೆ ಹೆಚ್ಚುವರಿ ಮಾಹಿತಿಗಾಗಿ ಜಾಲಾಡಿದ್ದಾರೆ. ಅದ್ಯಾವುದೂ ಫಲ ನೀಡದಿದ್ದಾಗ, ಅವರಲ್ಲಿನ ಸಾಫ್ಟ್ವೇರ್ ಕೌಶಲ ಬಳಸಿದ್ದಾರೆ. ಕೀ ಬೋರ್ಡ್‌ನಲ್ಲಿ “ಎಫ್ 12′ ಕೀ ಒತ್ತಿ, ಇಂಡಿಗೋ ವೆಬ್‌ಸೈಟ್‌ನ ಡೆವಲಪರ್ ಕನ್ಸೋಲ್‌ಗೆ ಹೋಗಿ ಅಲ್ಲಿ ತಮ್ಮೊಂದಿಗೆ ಚೆಕ್ ಇನ್ ಆಗಿದ್ದ ಎಲ್ಲ ಪ್ರಯಾಣಿಕರ ಪಟ್ಟಿಯಲ್ಲಿ ಪತ್ತೆ ಹಚ್ಚಿ ಆ ಸಹ ಪ್ರಯಾಣಿಕರ ಇ-ಮೇಲ್ ಅಡ್ರಸ್, ಫೋನ್ ನಂಬರ್ ಪತ್ತೆ ಹಚ್ಚಿದ್ದಾರೆ. ಅವುಗಳ ಮೂಲಕ ಅವರನ್ನು ಸಂಪರ್ಕಿಸಿದ ಕುಮಾರ್, ಅವರ ಬ್ಯಾಗ್ ತಲುಪಿಸಿ ತಮ್ಮ ಲಗೇಜ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.