ಬೆಂಗಳೂರು: ಬಸ್‌ನಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳ ಮತ್ತು ಶಾಸಕರ ಒಡಗೂಡಿ ನಗರ ಪ್ರದಕ್ಷಿಣೆ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಿಕ ಮೆಟ್ರೋ ಏರಿ ಪ್ರಯಾಣಿಕರ ಸಮಸ್ಯೆ ಆಲಿಸಿದರು.
ವಿಧಾನಸೌಧದಿಂದ ನಗರ ಪರಿವೀಕ್ಷಣೆ ಆರಂಭಿಸಿದ ಮುಖ್ಯಮಂತ್ರಿಗಳು ಬಳಿಕ ಹೆಬ್ಟಾಳ ರಸ್ತೆ ಮೂಲಕ ಕೆ.ಆರ್. ಪುರಂ ನತ್ತ ಮುಖ ಮಾಡಿದರು. ಕೆ.ಆರ್. ಪುರ ರೈಲ್ವೆ ನಿಲ್ದಾಣದ ಬಳಿ ಮೆಟ್ರೋ ಕಾಮ ಗಾರಿ ನಕ್ಷೆಗಳ ವೀಕ್ಷಣೆ ಮಾಡಿದರು.
ಈ ವೇಳೆ ಸ್ಥಳದಲ್ಲಿದ್ದ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಹಾಗೂ ಮೆಟ್ರೋ ಯೋಜನೆಯ ಹಿರಿಯ ಅಧಿಕಾರಿ ಗಳು ನಗರದಲ್ಲಿ ಕೈಗೊಳ್ಳಲಾಗಿರುವ ಮೆಟ್ರೋ ಕಾರ್ಯಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ಜತೆಗೆ ಕೆ.ಆರ್.ಪುರಂ ರೈಲ್ವೆ ನಿಲ್ದಾಣದ ಬಳಿ ನಡೆಯುತ್ತಿರುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ನೀಡಿದರು.
ರಸ್ತೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ಬಳಿಕ ಮುಖ್ಯಮಂತ್ರಿ ಸಿದ್ದರಾಯ್ಯ ಅವರು, ಕೆ.ಆರ್.ಪುರ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಹತ್ತಿ ವಿಧಾನ ಸೌಧದತ್ತ ಮುಖ ಮಾಡಿದರು. ಮೆಟ್ರೋ ಪ್ರಯಾಣದ ವೇಳೆ ಕೆಲ ಕ್ಷಣ ಪ್ರಯಾಣಿಕರ ಸಮಸ್ಯೆಗಳ ಜತೆಗೆ ಹಿತಾನುಭವ ಆಲಿಸಿದರು. ನಿತ್ಯ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರನ್ನು ಭೇಟಿಯಾಗಿ ಅವರ ಅನುಭವ ಕೇಳಿದರು. ಜೊತೆಗೆ ಮಕ್ಕಳ ಜೊತೆ ಮಗುವಾಗಿ ಸಮಯ ಕಳೆದರು.
ಯಾವುದೇ ಸಮಸ್ಯೆಯಿಲ್ಲದೆ ನಿಗದಿತ ಸಮಯಕ್ಕೆ ಸರಿಯಾಗಿ ತಲುಪಬಹುದಾದ ಮೆಟ್ರೋ ರೈಲು ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿ ಬದಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ವಿವಿಧ ಕಡೆಗಳಲ್ಲಿ ನಡೆದಿರುವ ಕಾಮಗಾರಿಗಳಿಗೆ ವೇಗ ನೀಡಿ ನಗರದ ಬಹುತೇಕ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದು ಇದೇ ವೇಳೆ ಮುಖ್ಯಮಂತ್ರಿ ತಿಳಿಸಿದರು.