Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜಧಾನಿ ಬೆಂಗಳೂರಿಗೆ ಸಂಬಂಧಪಟ್ಟಂತೆ 5 ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಈ ಪೈಕಿ 250 ಅಡಿ ಎತ್ತರದ ಆಕಾಶ ಗೋಪುರ (ಸ್ಕೈ ಡೆಕ್), ಹೆಬ್ಟಾಳದ ಎಸ್ಟೀಮ್ ಮಾಲ್ ಮೇಲ್ಸೇತುವೆಯಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್‌ನ ಮೇಲ್ಸೇತುವೆವರೆಗೆ 12,690 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅವಳಿ ಸುರಂಗ ಮಾರ್ಗ ಮಹತ್ವದ್ದಾಗಿದೆ.
Related Articles
Advertisement
ಅತ್ಯಂತ ಎತ್ತರದ ಪ್ರದೇಶದಲ್ಲಿ ನಿಂತು ಇಡೀ ಬೆಂಗಳೂರನ್ನು ಕಣ್ತುಂಬಿಕೊಳ್ಳುವ 500 ಕೋಟಿ ರೂ. ವೆಚ್ಚದಲ್ಲಿ ಸ್ಕೈಡೆಕ್ ನಿರ್ಮಿಸುವ ಪ್ರಸ್ತಾ ವನೆಗೆ ಸಂಪುಟದ ತಾತ್ವಕ ಒಪ್ಪಿಗೆ ಸಿಕ್ಕಿದೆ. ಹೆಮ್ಮಿಗೆಪುರ (ನೈಸ್ ರಸ್ತೆ ಕ್ಲೋವರ್ ಲೀಪ್ ಜಾಗ)ದಲ್ಲಿ 250 ಮೀಟರ್ ಎತ್ತರದ ಆಕಾಶ ಗೋಪುರ ನಿರ್ಮಾಣಕ್ಕೆ ಸೂಕ್ತ ಜಾಗ ಎಂದು ತೀರ್ಮಾನಿಸಲಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಕೂಸಾದ ಬ್ರ್ಯಾಂಡ್ ಬೆಂಗಳೂರಿನ ಭಾಗವಾಗಿ ಪ್ರವಾಸೋದ್ಯಮ ಉತ್ತೇಜನಗೊಳಿಸಲು ಈ ಯೋಜನೆಗೆ ಅನುಮತಿ ನೀಡಲಾಗಿದೆ.
12,690 ಕೋಟಿ ರೂ.ವೆಚ್ಚದ ಅವಳಿ ಸುರಂಗ ಮಾರ್ಗ
ಸಂಚಾರ ದಟ್ಟಣೆ ನಿವಾರಣೆ ಉದ್ದೇಶದಿಂದ 12,690 ಕೋಟಿ ರೂ. ಅಂದಾಜು ವೆಚ್ಚದ 18.5 ಕಿ.ಮೀ. ಉದ್ದ ಅವಳಿ ಸುರಂಗ ಮಾರ್ಗ ಮತ್ತು ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ತಾತ್ವಿಕವಾಗಿ ಅನುಮೋದನೆ ನೀಡಲಾಗಿದೆ. ಹೆಬ್ಟಾಳ ಮೇಲ್ಸೇತುವೆ (ಎಸ್ಟೀಮ್ ಮಾಲ್)ನಿಂದ ಹೊಸೂರು ರಸ್ತೆ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಭೂಗತ ವಾಹನ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಮೆ:ಅಲ್ಟಿನಾಕ್ ಕನ್ಸಲ್ಟಿಂಗ್ ಎಂಜಿನಿಯರಿಂಗ್ ಇನ್R ಸಂಸ್ಥೆಯವರು ನೀಡಿರುವ ಕಾರ್ಯಸಾಧ್ಯತಾ ವರದಿ ಆಧಾರದಲ್ಲಿ 18.5 ಕಿ.ಮೀ. ಉದ್ದದ ಭೂಗತ ವಾಹನ ಸುರಂಗ ಮಾರ್ಗ ಮತ್ತು ಬದಲಿ ಸ್ಥಳಗಳಲ್ಲಿ ಸಂಪರ್ಕ ರಸ್ತೆಗಳನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ. ಸಂಚಾರ ದಟ್ಟಣೆ ನಿವಾರಿಸಲು ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭೂಮಿಯ ಅಲಭ್ಯತೆ, ಭೂಸ್ವಾಧೀನದ ಪ್ರಕ್ರಿಯೆಯ ತೊಡಕು, ರಸ್ತೆಗಳ ವಿಸ್ತರಣೆ ಅತ್ಯಂತ ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಸುರಂಗ ಮಾರ್ಗದ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸರ್ಕಾರ ಬಯಸಿದೆ.
ಬೀದಿ ದೀಪ ನಿರ್ವಹಣೆಗೆ 680 ಕೋಟಿ
ಸಾಂಪ್ರದಾಯಿಕ ಬೀದಿದೀಪ ಗಳ ನಿರ್ವಹಣೆಯನ್ನು “ಇಂಧನ ಉಳಿ ತಾಯ- ವಾರ್ಷಿಕ ಪಾವತಿ ಮಾದರಿ (ಇಎಂಐ)’ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯೊಂದಿಗೆ ಎಲ್‌ಇಡಿ ಬೀದಿ ದೀಪ ಅಳವಡಿಕೆ ಹಾಗೂ 7 ವರ್ಷಗಳ ನಿರ್ವಹಣಾ ವೆಚ್ಚ 684.34 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಅಭಿವೃದ್ಧಿ ಕೆಲಸಗಳಿಗೆ ಟಿಡಿಆರ್ ಮಾರ್ಗಸೂಚಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು (ಟಿ.ಡಿ.ಆರ್.) ಯೋಜನೆಯಡಿ ಭೂಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಪ್ರಕ್ರಿಯೆಗಳಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ 1957ರಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಾರ್ಗಸೂಚಿಗಳನ್ವಯ ಸಾರ್ವಜನಿಕರಿಗೆ ಭೂ ಪರಿಹಾರ ನೀಡಲು ಮಾರ್ಗಸೂಚಿ ಪ್ರಕಟಿಸುವುದಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದಾಗಿ ಭೂ ಪರಿಹಾರ ನಿಗದಿ ತಾರತಮ್ಯ ಕೊನೆಗೊಳ್ಳುವ ಸಾಧ್ಯತೆ ಇದ್ದು, ಭೂಸ್ವಾಧೀನದ ಸಂಕೀರ್ಣತೆ ಇತ್ಯರ್ಥಗೊಳ್ಳಲಿದೆ. ಟಿಡಿಆರ್ ಯೋಜನೆಯಡಿ ಅಭಿವೃದ್ಧಿ ಹಕ್ಕು ಪ್ರಮಾಣಪತ್ರ (ಡಿ.ಆರ್.ಸಿ.) ನೀಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹೊರಡಿಸಿರುವ ಅಧಿಸೂಚನೆ ಆಧರಿಸಿ ಭೂಮಿ ಮೌಲ್ಯ ನಿಗದಿಪಡಿಸಿದೆ. ಮಾರ್ಗಸೂಚಿ ಹೀಗಿದೆ…
ಭೂಸ್ವಾಧೀನಕ್ಕೆ ಒಳಪಡುವ ಭೂಮಿಯು ಕೃಷಿ ಭೂಮಿಯಾಗಿದ್ದಲ್ಲಿ ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಲು ತಗುಲುವ ಶುಲ್ಕ, ಅಭಿವೃದ್ಧಿ ಶುಲ್ಕ ಇನ್ನಿತರ ಶಾಸನಾತ್ಮಕ ಶುಲ್ಕಗಳನ್ನು ಪಾವತಿಸಿಕೊಂಡು ಈ ಭೂಮಿಗೆ ಅಭಿವೃದ್ಧಿ ಹೊಂದಿದ ವಸತಿ ಉದ್ದೇಶದ ದರದಲ್ಲಿ ಟಿಡಿಆರ್/ಡಿಆಸಿರ್ ನೀಡುವುದು.
ಭೂಸ್ವಾಧೀನಕ್ಕೆ ಒಳಪಡುವ ಭೂಮಿಯು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲಾದ ಭೂಮಿಯು ವಸತಿ ಉದ್ದೇಶಕ್ಕೆ ಪರಿವರ್ತನೆಯಾಗಿದ್ದಲ್ಲಿ ಅಭಿವೃದ್ಧಿ ಇನ್ನಿತರ ಶಾಸನಾತ್ಮಕ ಶುಲ್ಕಗಳನ್ನು ಪಾಲಿಕೆಯು ಪಾವತಿಸಿಕೊಂಡು ಈ ಭೂಮಿಗೆ ಅಭಿವೃದ್ಧಿ ಹೊಂದಿದ ವಸತಿ ಉದ್ದೇಶದ ದರದಲ್ಲಿ ಟಿಡಿಆರ್/ಡಿಆಸಿರ್ ನೀಡುವುದು.
ಭೂಸ್ವಾಧೀನಕ್ಕೆ ಒಳಪಡುವ ಭೂಮಿಯು ಕೃಷಿಯೇತರ ಕೈಗಾರಿಕಾ ಉದ್ದೇಶಕ್ಕೆ ಪರಿವರ್ತನೆಯಾಗಿದ್ದಲ್ಲಿ ಅಭಿವೃದ್ಧಿ ಇನ್ನಿತರ ಶಾಸನಾತ್ಮಕ ಶುಲ್ಕಗಳನ್ನು ಪಾಲಿಕೆಯು ಪಾವತಿಸಿಕೊಂಡು ಈ ಭೂಮಿಗೆ ಅಭಿವೃದ್ಧಿ ಹೊಂದಿದ ಕೈಗಾರಿಕೆ ಉದ್ದೇಶದ ದರದಲ್ಲಿ ಟಿಡಿಆರ್/ ಡಿಆಸಿರ್ ನೀಡುವುದು.
ಭೂಸ್ವಾಧೀನಕ್ಕೆ ಒಳಪಡುವ ಭೂಮಿಯು ಕೃಷಿಯೇತರ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆಯಾಗಿದ್ದರೆ ಅಭಿವೃದ್ಧಿ ಇನ್ನಿತರ ಶುಲ್ಕಗಳನ್ನು ಪಾಲಿಕೆಯು ಪಾವತಿಸಿಕೊಂಡು ಈ ಭೂಮಿಗೆ ಅಭಿವೃದ್ಧಿ ಹೊಂದಿದ ವಾಣಿಜ್ಯ ಉದ್ದೇಶದ ದರದಲ್ಲಿ ಟಿಡಿಆರ್/ ಡಿಆಸಿರ್ ನೀಡುವುದು.
ಭೂಮಿ ಪರಿವರ್ತನೆಯಾದ ನಂತರ ನೇರವಾಗಿ ಬಿಬಿಎಂಪಿಯಿಂದ ಎ’ ಖಾತಾ ನೀಡಿರುವ ಪ್ರಕರಣಗಳಲ್ಲಿ (ಯೋಜನಾ ಪ್ರಾಧಿಕಾರದಿಂದ ಏಕ ನಿವೇಶನ ವಿನ್ಯಾಸ ನಕ್ಷೆ ಅನುಮೋದನೆ ಪಡೆಯದೇ) ಅಭಿವೃದ್ಧಿ ಹೊಂದಿದ ದರದಲ್ಲಿ ಟಿಡಿಆರ್/ಡಿಆಸಿರ್ ನೀಡುವುದು.
ಬಿಬಿಎಂಪಿಯು ಸಂಗ್ರಹಿಸಿದ ಶುಲ್ಕ/ ಫೀಗಳನ್ನು ಕಂದಾಯ ಇಲಾಖೆ ಸೇರಿ ಆಯಾ ಇಲಾಖೆಗಳು/ ಸಂಸ್ಥೆಗಳು./ ಪ್ರಾಧಿಕಾರಗಳಿಗೆ ಏಳು ದಿನಗಳೊಳಗಾಗಿ ಪಾವತಿಸುವುದು.
■ ಉದಯವಾಣಿ ಸಮಾಚಾರ