Advertisement

Bengaluru: ಕನ್ನಡ ಬದುಕಿನ ಭಾಷೆಯಾಗಿಸುವುದೇ ನಮ್ಮ ಗುರಿ: ಡಿ.ಕೆ. ಶಿವಕುಮಾರ್‌

10:04 AM Nov 02, 2024 | Team Udayavani |

ಬೆಂಗಳೂರು: ಮನಸ್ಸಿನ ಭಾಷೆಯಾಗಿರುವ ಕನ್ನಡ ನಮ್ಮೆಲ್ಲರ ಹೆಮ್ಮೆ. ಅದನ್ನು ಬದುಕಿನ ಭಾಷೆಯಾಗಿಸುವುದೇ ನಮ್ಮ ಗುರಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 69ನೇ ಕರ್ನಾಟಕದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣಗೊಳಿಸಿ 50 ವರ್ಷ ತುಂಬಿ 51ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ನಮ್ಮೆಲ್ಲರಿಗೂ ಬದುಕು ನೀಡಿದ ಈ ಪುಣ್ಯಭೂಮಿ ನಮ್ಮೆಲ್ಲರಿಗೂ ಸ್ವರ್ಗ, ಕನ್ನಡವೇ ನಮ್ಮ ದೇವ ಭಾಷೆ, ಇಲ್ಲಿ ಹರಿಯುವ ತುಂಗ, ಭದ್ರೆ, ಕಾವೇರಿ, ಕೃಷ್ಣ ನದಿಯೇ ನಮಗೆ ಪುಣ್ಯ ತೀರ್ಥ. ಇಲ್ಲಿ ನೆಲೆಸಿರುವ ಪ್ರತಿಯೊಬ್ಬರು ತಾಯಿ ನಾಡಿಗೆ ಗೌರವ ಸಲ್ಲಿಸುವುದರ ಜತೆಗೆ, ಸಂಸ್ಕೃತಿ, ಪರಂಪರೆಯನ್ನು ಉಳಿಸುವುದರ ಜತೆ ಗೆ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಬೇಕು ಎಂದರು.

ಬದುಕಿನ ಪ್ರತೀಕ್ಷಣ ಕನ್ನಡವನ್ನೇ ಉಸಿರಾಗಿಸಿ ಕೊಳ್ಳಬೇಕು. ಆ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ಎಲ್ಲ ಖಾಸಗಿ ಸಂಸ್ಥೆಗಳು, ಶಾಲಾ-ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳು ತಮ್ಮ ಕಚೇರಿಯಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಆದೇಶ ಮಾಡಲಾಗಿದೆ. ಕುವೆಂಪು ನಾಡಗೀತೆ ಮೂಲಕ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ ಎಂಬ ವಿಶ್ವಮಾನವ ಸಂದೇಶ ನೀಡಿದ್ದಾರೆ. ಇದೇ ನಮ್ಮ ವಿಶೇಷತೆ. ಇದನ್ನು ಗಮನಿಸಿ ವಿಶ್ವದ ಬಹುತೇಕ ಭಾಗದ ಜನ ಬಂದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ವಿಶ್ವದೆಲ್ಲಡೆ ಕನ್ನಡಿಗರು ಕನ್ನಡ ನೆಲ, ಜಲದೊಂದಿಗೆ ಭಿನ್ನ ವೈವಿಧ್ಯತೆ, ಸಂಸ್ಕೃತಿಯನ್ನು ಹೊಂದಿದೆ. ಅನೇಕ ಕನ್ನಡಿಗರು ವಿಶ್ವದ ಮೂಲೆ ಮೂಲೆಯಲ್ಲಿ ಕನ್ನಡ ಹಾಗೂ ಕನ್ನಡದ ಸಂಸ್ಕೃತಿ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಭಾರತ ಮಾತ್ರವಲ್ಲದೆ‌ ಇಡೀ ವಿಶ್ವದ ಎಲ್ಲ ಕನ್ನಡಿಗರು ಒಂದಾಗಿದ್ದಾರೆ. ಕನ್ನಡದ ಅಭಿವೃದ್ಧಿಯೂ ಮಿಂಚಿನ ಓಟದಲ್ಲಿ ಸಾಗುತ್ತಿದೆ ಎಂದರು.

Advertisement

ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಜಗಕೆಲ್ಲ ಜ್ಯೋತಿಯಾಗು ಮಾತಿನಂತೆ ಯುವಜನತೆ ದೇಶದ ಆಸ್ತಿ. ಇಡೀ ವಿಶ್ವವೇ ನಿಮ್ಮನ್ನು ನೋಡುತ್ತಿದೆ. ಹೀಗಾಗಿ ಪ್ರಾಚೀನ ಇತಿಹಾಸವಿರುವ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next