Advertisement

ಮಾರುಕಟ್ಟೆಗಳು ಇಂದಿನಿಂದ ಮುಕ್ತ

12:13 PM Sep 01, 2020 | Suhan S |

ಬೆಂಗಳೂರು: ಕಳೆದ ಐದು ತಿಂಗಳಿಂದ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಕೃಷ್ಣರಾಜೇಂದ್ರ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಮಂಗಳವಾರದಿಂದ ವ್ಯಾಪಾರಕ್ಕೆ ಮುಕ್ತವಾಗಲಿದೆ.

Advertisement

ಸೋಮವಾರದಿಂದಲೇ ಇಲ್ಲಿನ ಮಳಿಗೆಗಳ ಸ್ವಚ್ಛತೆಗೆ ಅವಕಾಶ ಮಾಡಿಕೊಡಲಾಗಿದೆ. ಕೆ.ಆರ್‌.ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಆಯುಕ್ತರು, ಲಾಕ್‌ಡೌನ್‌ ಬಳಿಕ ಐದು ತಿಂಗಳು ಮಾರುಕಟ್ಟೆ ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು. ಇದೀಗ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಮಂಗಳವಾರದಿಂದ ಕೆ.ಆರ್‌. ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸೋಮವಾರದಿಂದಲೇ ಮಾರುಕಟ್ಟೆಯಲ್ಲಿನ ಮಳಿಗೆಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪಾಲಿಕೆ ವತಿಯಿಂದಲೂ ಸ್ಯಾನಿಟೈಸ್‌ ಮಾಡಲಾಗುತ್ತಿದೆ ಎಂದರು. ವ್ಯಾಪಾರ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಸಾಮಾಜಿಕ ಅಂತರಕ್ಕೆ ಜಾಗ ಗುರುತಿಸಲಾಗಿದೆ. ಕಡ್ಡಾಯವಾಗಿ ಎಲ್ಲರು ಮಾಸ್ಕ್ ಧರಿಸಬೇಕು ಹಾಗೂ ಪ್ರತಿ ಅಂಗಡಿಯ ಮುಂಭಾಗದಲ್ಲೂ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಮಳಿಗೆಗಳಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ: ಮೊದಲ ಹಂತದಲ್ಲಿ ಮಳಿಗೆಗಳಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೀದಿಬದಿಯ ಭಾಗಗಳಲ್ಲಿ ವ್ಯಾಪಾರ ಮಾಡದಂತೆ ಸೂಚಿಸಲಾಗಿದೆ. ಇದಕ್ಕೆ ವ್ಯಾಪಾರಿಗಳು ಒಪ್ಪಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡುವುದು ಸೇರಿದಂತೆ ನಿಯಮ ಪಾಲನೆಗೆ 15 ಜನ ಮಾರ್ಷಲ್‌ಗ‌ಳನ್ನು ನೇಮಕ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದರು.

Advertisement

ರೈತಸಂಘ ಹಾಗೂ ವ್ಯಾಪಾರಿಗಳು ಮಾರುಕಟ್ಟೆ ಪ್ರಾರಂಭಿಸುವಂತೆ ಮನವಿ ಮಾಡಿದ್ದರು. ಹೀಗಾಗಿ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ವ್ಯಾಪಾರಿಗಳು ಹಾಗೂ ಸಾರ್ವಜನಿಕರು ನಿಯಮ ಪಾಲನೆ ಮಾಡುವ ಮೂಲಕ ಪಾಲಿಕೆಗೆ ಸಹಕಾರ ನೀಡಬೇಕು ಎಂದು ಆಯುಕ್ತರು ಕೋರಿದರು.

ಈ ವೇಳೆ ಶಾಸಕ ಉದಯ ಬಿ. ಗರುಡಾಚಾರ್‌, ವಿಶೇಷ ಆಯುಕ್ತ (ಮಾರುಕಟ್ಟೆ) ರವೀಂದ್ರ, ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್‌ ಹಾಗೂ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫ ರಾಜ್‌ಖಾನ್‌ ಸೇರಿದಂತೆ ಮತ್ತಿತರರು ಹಾಜರಿದ್ದರು.

3 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ಅಭಿವೃದ್ಧಿ : ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಕೃಷ್ಣರಾಜೇಂದ್ರ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲಾಗುವುದು. ಮಾರುಕಟ್ಟೆ ಮೂಲ ಸ್ವರೂಪ ಧಕ್ಕೆಯಾಗದಂತೆ ಅಭಿವೃದ್ಧಿ ಮಾಡಲಾಗುವುದು. ಅಗ್ನಿ ಅವಘಡ ತಡೆಯುವ ಉದ್ದೇಶದಿಂದ ಅಗ್ನಿ ನಿರೋಧಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅದೇ ರೀತಿ ಕೃಷರಾಜೇಂದ್ರ ಮಾರುಕಟ್ಟೆ ಜಂಕ್ಷನ್‌ ಅಭಿವೃದ್ಧಿ ಮಾಡುವ ನಿಟ್ಟಿನಲ್ಲೂ ಚರ್ಚೆ ನಡೆದಿದೆ ಎಂದು ಆಯುಕ್ತ ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಬಾಡಿಗೆ; ಚರ್ಚೆ ಆಗಿಲ್ಲ: ಕೋವಿಡ್ ಕಾರಣ  ದಿಂದ 5 ತಿಂಗಳು ಮಾರುಕಟ್ಟೆ ಮುಚ್ಚಲಾಗಿದ್ದು, ಮಳಿಗೆಗಳ ಮಾಲೀಕರಿಂದ ಬಾಡಿಗೆ ತೆಗೆದುಕೊಳ್ಳುವ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next