ಬೆಂಗಳೂರು: ಸೋಂಕು ಭೀತಿ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ಮುಚ್ಚಲಾಗಿದ್ದ ಕೃಷ್ಣರಾಜೇಂದ್ರ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಮಂಗಳವಾರದಿಂದ ಪ್ರಾರಂಭವಾಗಿದೆ.
ಕೆ.ಆರ್.ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದನ್ನೇ ಮುಖ್ಯ ವೃತ್ತಿಯಾಗಿ ಮಾಡಿಕೊಂಡಿರುವ ನೂರಾರು ಜನ ವ್ಯಾಪಾರಿಗಳು ಕಳೆದ ಐದು ತಿಂಗಳಿನಿಂದ ಯಾವುದೇ ವ್ಯಾಪಾರವಿಲ್ಲದೆ ನಷ್ಟದಲ್ಲೇ ಕಾಲಕಳೆದಿದ್ದರು. ಹೋರಾಟದ ನಂತರ ಪಾಲಿಕೆ ಈ ಎರಡು ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆಯಾದರೂ, ಶೇ.30ರಷ್ಟು ಸಾರ್ವಜನಿಕರೂ ಮಾರುಕಟ್ಟೆಗಳತ್ತ ಮುಖ ಮಾಡದೆ ಇರುವುದು ಇಲ್ಲಿನ ವ್ಯಾಪಾರಿಗಳಲ್ಲಿ ನಿರಾಸೆ ಮತ್ತು ಆತಂಕ ಮೂಡಿಸಿದೆ.
ವ್ಯಾಪಾರಿಗಳು ಇಲ್ಲ, ಗ್ರಾಹಕರೂ ಇಲ್ಲ: ಎರಡು ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುವುದಕ್ಕೆ ಪಾಲಿಕೆ ಅಧಿಕೃತವಾಗಿ ಅವಕಾಶ ಕಲ್ಪಿಸಿದೆಯಾದರೂ ವ್ಯಾಪಾರ ಮಾಡಲು ಮಳಿಗೆಯ ಮಾಲೀಕರು ಹಾಗೂ ಖರೀದಿಸಲು ಗ್ರಾಹಕರು ಹಿಂದೇಟು ಹಾಕಿದ್ದು ಕಂಡು ಬಂತು. ಸೋಮವಾರ ಬೆಳಗ್ಗೆಯಿಂದಲೇ ಇಲ್ಲಿನ ಮಳಿಗೆಗಳ ಸ್ವತ್ಛತಾ ಕಾರ್ಯ ಪ್ರಾರಂಭಿಸಿ ಮಂಗಳವಾರದಿಂದ ವ್ಯಾಪಾರ ಮಾಡಲು ಪಾಲಿಕೆ ಅವಕಾಶ ಮಾಡಿ ಕೊಟ್ಟಿದೆಯಾದರೂ ಗ್ರಾಹಕರ ಕೊರತೆ ಎದ್ದು ಕಾಣಿಸುತ್ತಿತ್ತು.
ಮಾರುಕಟ್ಟೆಯಿಂದ ಹೊರಕ್ಕೆ ಬಂದು ವ್ಯಾಪಾರ: ಕೆ.ಆರ್. ಮಾರುಕಟ್ಟೆಯ ಒಳಭಾಗದಲ್ಲಿ ಸಾರ್ವಜನಿಕರು ಬಂದು ವ್ಯಾಪಾರ ಮಾಡದ ಹಿನ್ನೆಲೆಯಲ್ಲಿ ವ್ಯಾಪಾರಿಗಳೇ ಹೂವಿನ ಹಾರವನ್ನು ಹೊರಕ್ಕೆ ತಂದು ಮಾರಾಟ ಮಾಡಲು ಮುಂದಾಗಿದ್ದು, ಕಂಡುಬಂತು. ಮಾರುಕಟ್ಟೆಯ ಮುಖ್ಯ ರಸ್ತೆಯಲ್ಲಿ ಹೂವಿನ ಹಾರ ಹಿಡಿದು ವ್ಯಾಪಾರಿಗಳು ಮಾರಾಟ ಮಾಡಲು ಮುಂದಾದರಾದರೂ ಇಲ್ಲಿಯೂ ಗ್ರಾಹಕರು ಹೂ ಖರೀದಿಸಲು ಬರಲಿಲ್ಲ.
ಬುಧವಾರದಿಂದ ದಂಡ: ಕೆ.ಆರ್. ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಳಿಗೆಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕು ಎನ್ನುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ ಈ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುವುದಕ್ಕೆ ಪಾಲಿಕೆ ಅವಕಾಶ ಕಲ್ಪಿಸಿದೆ. ಅಲ್ಲದೆ, ಈ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿದೆಯೋ ಇಲ್ಲವೋ ಎಂದು ನಿಗಾ ವಹಿಸಲು 15 ಜನ ಮಾರ್ಷಲ್‌ಗಳನ್ನೂ ಪಾಲಿಕೆ ನೇಮಕ ಮಾಡಿದೆ. ಆದರೆ, ಮಂಗಳವಾರ ಹಲವು ವ್ಯಾಪಾರಿಗಳು ಈ ನಿಯಮ ಉಲ್ಲಂಘನೆ ಮಾಡಿದ್ದು, ಇವರಿಗೆ ಮಂಗಳವಾರ ಎಚ್ಚರಿಕೆ ನೀಡಿ ಬಿಡಲಾಗಿದೆ. ಬುಧವಾರದಿಂದ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲು ಮಾರ್ಷಲ್‌ಗಳು ನಿರ್ಧರಿಸಿದ್ದಾರೆ.
ಕೊಳಚೆ ನಡುವೆಯೇ ವ್ಯಾಪಾರ ಮಾಡಿದ ವ್ಯಾಪಾರಿಗಳು: ಕಳೆದ ಎರಡು ದಿನಗಳಲ್ಲಿಂದ ನಗರದಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಲಾಸಿಪಾಳ್ಯ ಮಾರುಕಟ್ಟೆ ಅಕ್ಷರಶಃ ಕೆಸರುಗೆದ್ದಯಂತೆ ಬದಲಾಗಿದ್ದು, ಕೆಸರು ಹಾಗೂ ಕೊಳಚೆ ಪ್ರದೇಶದಲ್ಲೇ ವ್ಯಾಪಾರಿಗಳು ವ್ಯಾಪಾರ ಮಾಡಿದ್ದು, ಕಂಡುಬಂತು.