ಮಂಗಳೂರು : ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಸುಬ್ರಹ್ಮಣ್ಯ – ಸಿರಿಬಾಗಿಲು ನಡುವೆ ರೈಲು ಹಳಿಯಲ್ಲಿ ಗುಡ್ಡ ಕುಸಿದು ಅಪಾರ ಪ್ರಮಾಣದ ಮಣ್ಣು ರಾಶಿ ಬಿದ್ದಿರುವ ಕಾರಣ ಬೆಂಗಳೂರು – ಮಂಗಳೂರು ನಡುವಿನ ರೈಲು ಸಂಚಾರ ರದ್ದಾಗಿದೆ.
ರೈಲು ಹಳಿಯ ಮೇಲೆ ಗುಡ್ಡ ಕುಸಿತದಿಂದಾಗಿ ಭಾರೀ ಪ್ರಮಾಣದ ಮಣ್ಣು ಬಿದ್ದಿರುವುದರಿಂದ ರೈಲು ಸಂಚಾರ ಅಸಾಧ್ಯವಾಗಿದೆ.
ಇಂದು ಬೆಳಗ್ಗೆ 10.50ರ ಹೊತ್ತಿಗೆ ಮಂಗಳೂರಿನಿಂದ ಹೊರಟಿದ್ದ ಕಾರವಾರ – ಬೆಂಗಳೂರು ರೈಲು ಸುಬ್ರಹ್ಮಣ್ಯದ ವರೆಗೆ ಕ್ರಮಿಸಿ ಅನಂತರ ಮುಂದಿನ ಯಾನವನ್ನು ರದ್ದುಗೊಳಿಸಿತು.
ಇದೇ ರೀತಿ ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ರೈಲು ಸಕಲೇಶಪುರದ ವರೆಗೆ ಮಾತ್ರವೇ ಬಂದು ಅನಂತರದ ತನ್ನ ಯಾನವನ್ನು ರದ್ದುಗೊಳಿಸಿತು.
ರೈಲು ಹಳಿಯ ಮೇಲೆ ರಾಶಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲು ಜೆಸಿಬಿ ಗಳು ಸಮರೋಪಾದಿಯಲ್ಲಿ ಕಾರ್ಯಾಚರಿಸುತ್ತಿವೆ.
ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದು ಅಡಚಣೆ ತೆರವಿನ ಉಸ್ತುವಾರಿ ನಡೆಸುತ್ತಿದ್ದಾರೆ.