ಬೆಂಗಳೂರು: ಪ್ರಿಯಕರನೊಂದಿಗಿನ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಯುವತಿಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲಪಟಾಯಿಸಿದ್ದ ಯುವಕನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ. ನಗರದ ಹರ್ಫಾತ್ ಬಂಧಿತ ಆರೋಪಿ. ಈತನಿಂದ 15 ಲಕ್ಷ ರೂ. ಮೌಲ್ಯದ 264 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಜಯನಗರದ ನಿವಾಸಿ ಜ್ಯುವೆಲ್ಲರಿ ಅಂಗಡಿ ಮಾಲೀಕರೊಬ್ಬರ ಪುತ್ರಿ ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಳು. ಇತ್ತೀಚೆಗೆ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿದ್ದಳು. ಕಾಲೇಜಿನಲ್ಲಿ ಓದುತ್ತಿದ್ದಾಗ ಡ್ಯಾನಿಶ್ ಎಂಬುವನೊಂದಿಗೆ ಯುವತಿ ಸ್ನೇಹ ಬೆಳೆಸಿಕೊಂಡಿದ್ದಳು. ಇವರಿಬ್ಬರಿಗೂ ಆರೋಪಿ ಹರ್ಫಾತ್ ಸ್ನೇಹಿತನಾಗಿದ್ದ. ಕೆಲ ದಿನಗಳ ಹಿಂದೆ ಯುವತಿ ಹಾಗೂ ಸ್ನೇಹಿತ ಡ್ಯಾನಿಶ್ ಇಬ್ಬರೂ ಆರೋಪಿಯಿಂದ ಅಂತರ ಕಾಯ್ದುಕೊಂಡಿದ್ದರು.
ಚಿನ್ನಕ್ಕಾಗಿ ಬ್ಲ್ಯಾಕ್ ಮೇಲ್: ಇತ್ತ ಹರ್ಫಾತ್ ಯುವತಿಗೆ ಕರೆ ಮಾಡಿ ಡ್ಯಾನಿಶ್ ಜೊತೆಗಿನ ಖಾಸಗಿ ವಿಡಿಯೋ ಹಾಗೂ ಫೋಟೋ ಇರುವುದಾಗಿ ಸುಳ್ಳು ಹೇಳಿ ಬೆದರಿಸಿದ್ದ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ವೈರಲ್ ಮಾಡುವುದಾಗಿ ಬೆದರಿಸಿದ್ದ. ಆತನ ಒತ್ತಡಕ್ಕೆ ಮಣಿದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಹಂತ-ಹಂತವಾಗಿ ಆತನಿಗೆ ಕೊಟ್ಟಿದ್ದಳು. ಇತ್ತ ಮನೆಯಲ್ಲಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವು ಕಳವಾಗಿರುವುದನ್ನು ಗಮನಿಸಿದ ಜ್ಯುವೆಲ್ಲರ್ ಮಾಲಿಕರು ಈ ಕುರಿತು ತಮ್ಮ ಮಗಳನ್ನು ಪ್ರಶ್ನಿಸಿದ್ದರು. ಆಗ ಆಕೆ ಗೊಂದಲದ ಮಾತುಗಳನ್ನು ಆಡಿದ್ದಳು. ಸ್ನೇಹಿತರೊಂದಿಗೆ ಸೇರಿ ಮನೆಯಲ್ಲಿ ಮಗಳು ಚಿನ್ನಾಭರಣ ಕಳವು ಮಾಡಿರುವುದಾಗಿ ಜ್ಯುವೆಲ್ಲರಿ ಮಾಲಿಕರು ತನ್ನ ಮಗಳ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕೆ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯಾಂಶ ಹೊರ ಬಂದಿದೆ.
ಕೂಡಲೇ ಆರ್.ಟಿ.ನಗರದಲ್ಲಿದ್ದ ಆರೋಪಿ ಹರ್ಫಾತ್‌ನನ್ನು ವಶಕ್ಕೆ ಪಡೆದ ಪೊಲೀಸರು ಚಿನ್ನಾಭರಣದ ಬಗ್ಗೆ ಪ್ರಶ್ನಿಸಿದಾಗ ಚಿನ್ನದ ಅಂಗಡಿಯೊಂದರಲ್ಲಿ ಅಡವಿಟ್ಟಿರುವುದಾಗಿ ಹೇಳಿದ್ದ. ಆ ಅಂಗಡಿಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಯುವತಿಯ ಖಾಸಗಿ ವಿಡಿಯೋ ಇರುವುದಾಗಿ ಸುಳ್ಳು ಹೇಳಿರುವುದು ತನಿಖೆಯಲ್ಲಿ ಗೊತ್ತಾಗಿದೆ.