Advertisement

ನಾಳೆಯಿಂದ ಮೂರು ದಿನ ಕೃಷಿ ಮೇಳ

12:10 PM Nov 10, 2020 | Suhan S |

ಬೆಂಗಳೂರು: ರೈತರ ಸಂತೆ “ಬೆಂಗಳೂರು ಕೃಷಿ ಮೇಳ’ಕ್ಕೆ ಇಲ್ಲಿನ ಹೆಬ್ಟಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ) ಕೋವಿಡ್ ವೈರಸ್‌ ನಿಯಂತ್ರಣ ಕ್ರಮಗಳೊಂದಿಗೆ ಸಕಲರೀತಿಯಲ್ಲಿ ಸಜ್ಜಾಗಿದ್ದು, ಬುಧವಾರ ದಿಂದ 3 ದಿನಗಳಕಾಲ ನಡೆಯಲಿದೆ.

Advertisement

ಈ ಬಾರಿ ಭೌತಿಕವಾಗಿ ರೈತರು ಮತ್ತು ಸಾರ್ವಜನಿಕರ ಭೇಟಿಗೆ ನಿಯಂತ್ರಣ ಇರಲಿದ್ದು, 200 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ,ಎಲ್ಲ ಹತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ 13 ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ಗಳಲ್ಲಿ ಪರದೆಗಳನ್ನು ಹಾಕಿ ನೇರಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ಯೂ-ಟ್ಯೂಬ್‌, ವಾಟ್ಸ್‌ಆ್ಯಪ್‌, ಝೂಮ್‌, ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ ಎಲ್ಲ ಪ್ರಕಾರದ ಸಾಮಾಜಿಕ ಜಾಲತಾಣಗಳಲ್ಲೂ ರೈತರು ಮೇಳವನ್ನು ವೀಕ್ಷಿಸುವುದರ ಜತೆಗೆ ವಿಜ್ಞಾನಿಗಳು, ತಂತ್ರಜ್ಞರು, ಪ್ರಗತಿಪರ ರೈತರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್‌. ರಾಜೇಂದ್ರ ಪ್ರಸಾದ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿಜಿಟಲ್‌ ಸೇರಿದಂತೆ ಒಟ್ಟಾರೆ ನಿತ್ಯ 1.5ರಿಂದ 2 ಲಕ್ಷ ಜನ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನೇರ ಪ್ರಸಾರ ಇರಲಿದೆ. ಬೆಳಗ್ಗೆ 10-11ರವರೆಗೆ ಪ್ರಾತ್ಯಕ್ಷಿಕೆ ತಾಕುಗಳು ಮತ್ತು ಮಳಿಗೆಗಳನ್ನು ವೀಕ್ಷಿಸಬಹುದು. ಮಧ್ಯಾಹ್ನ 2-4ರವರೆಗೆ ರೈತರ ಪ್ರಶ್ನೆಗಳಿಗೆ ವಿಜ್ಞಾನಿಗಳು ಉತ್ತರಿಸಲಿದ್ದಾರೆ. ಬೇಡಿಕೆ ಹೆಚ್ಚಿದರೆ ಈ ಸಮಯವನ್ನು ವಿಸ್ತರಿಸಲಾಗುವುದು ಎಂದರು.

ಇನ್ನು ಪ್ರತಿ ತಾಲೂಕಿನಿಂದ 50 ಜನ ಪ್ರಗತಿಪರ ರೈತರನ್ನು ಆಯ್ಕೆ ಮಾಡಲಾಗಿದ್ದು, ಅವರು ನಿಗದಿತ ಅವಧಿಯಲ್ಲಿ ಆಗಮಿಸಲಿದ್ದಾರೆ. ನ. 11ರಂದು ರಾಮನಗರ, ತುಮಕೂರು, ಹಾಸನ ಜಿಲ್ಲೆ ರೈತರು ಭೇಟಿ ನೀಡಲಿದ್ದಾರೆ. 12ರಂದು ಬೆಂಗಳೂರು ನಗರ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ 13ರಂದು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ರೈತರು ಭಾಗವಹಿಸಲಿದ್ದಾರೆ. ಎಲ್ಲರಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದರು.

ಕೋವಿಡ್ ಹಾವಳಿ ಹಿನ್ನೆಲೆಯಲ್ಲಿ ಈ ಬಾರಿ ಮೇಳವನ್ನು ನಡೆಸುವ ಉದ್ದೇಶ ಇರಲಿಲ್ಲ. ಆದರೆ, ಸಂಶೋಧನೆಗಳು ಮತ್ತು ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವ ದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದ್ದು, ಡಿಜಿಟಲ್‌ ವ್ಯವಸ್ಥೆಗೆ ಹೆಚ್ಚು ಒತ್ತುಕೊಡಲಾಗಿದೆ. ಬಹುತೇಕ ರೈತರು ಸ್ಮಾರ್ಟ್‌ಫೋನ್‌ ಹೊಂದಿದ್ದಾರೆ. ಹಾಗಾಗಿ, ಅಂಗೈಯಲ್ಲೇ ರೈತರು ವೀಕ್ಷಿಸಬಹುದು. ಮೇಳದಲ್ಲಿ ಹೆಸರಘಟ್ಟದ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಒಂದು ಮಳಿಗೆ ಒಳಗೊಂಡಂತೆ ಜಿಕೆವಿಕೆಯ 20-25 ಮಳಿಗೆಗಳು, ತಾಕುಗಳ ಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದರು.

Advertisement

ಆನ್‌ಲೈನ್‌ ಮೂಲಕ ಮೇಳದಲ್ಲಿ ಭಾಗವಹಿಸಿ :

 

 ಮೇಳದ ವೆಬ್‌ಸೈಟ್‌: www.krishimela2020uasb.com

ಯೂ-ಟ್ಯೂಬ್‌: //www.youtube.com/channel/UCT3_1fb8uL8gXMjtckT3Bqg

ಫೇಸ್‌ಬುಕ್‌: //www.facebook. com/sis.uasb

ಟ್ವಿಟರ್‌: //twitter.com/BangaloreUas

ಇನ್‌ಸ್ಟಾಗ್ರಾಮ್‌: //instagram.com/uasbangalore1964/?hI=en

ವಾಟ್ಸ್‌ಆ್ಯಪ್‌: //wa.me/919482477812

ಝೂಮ್‌ ಸಭೆ: //rawe2020.in/krishimela/zoom/

 

3 ಹೊಸ ತಳಿಗಳು :

ನೆಲಗಡಲೆ(ಜಿಕೆವಿಕೆ- 27):

110-115 ದಿನಗಳು, ಎಕರೆಗೆ 12-13ಕ್ವಿಂಟಲ್‌ ಇಳುವರಿ, ಮುಂಗಾರು ಮತ್ತು ಬೇಸಿಗೆ ಬಿತ್ತನೆಗೆ ಸೂಕ್ತ. ಬರ ನಿರೋಧಕ ಶಕ್ತಿ ಹೊಂದಿದ್ದು, ಎಲೆಚುಕ್ಕೆ, ತುಕ್ಕುರೋಗ ನಿರೋಧಕ ಗುಣ ಹೊಂದಿದೆ.

ಅಲಸಂದೆ(ಕೆಸಿ-8):80-85 :

ದಿನಗಳು, ಎಕರೆಗೆ5.2ರಿಂದ5.6 ಕ್ವಿಂಟಲ್‌ ಇಳುವರಿ, ಜುಲೈ-ಸೆಪ್ಟೆಂಬರ್‌ ಮತ್ತು ಜನವರಿ-ಫೆಬ್ರವರಿ ಬಿತ್ತನೆಗೆ ಸೂಕ್ತ.

ಮೇವಿನ ಅಲಸಂದೆ(ಎಂಎಫ್ ಸಿ-09-3):80-85 ದಿನಗಳು, ಎಕರೆಗೆ32-33ಕ್ವಿಂಟಲ್‌ ಒಣ ಮೇವು, ಎಕರೆಗೆ4.8-5.1ಕಚ್ಚಾ ಸಸಾರಜನಕ ಇಳುವರಿ ಬರುತ್ತದೆ. ಹಳದಿ ಎಲೆ ನಂಜು, ತುಕ್ಕು ರೋಗ ನಿರೋಧಕ, ಎಲೆಚುಕ್ಕೆ ರೋಗಗಳ ಸಹಿಷ್ಣುತೆ ಗುಣ ಹೊಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next