ಬೆಂಗಳೂರು: ಕರಗ ಹೊರುವ ವಿಚಾರಕ್ಕೆ ಈ ಬಾರಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಹೊತ್ತಿದ್ದ ಜ್ಞಾನೇಂದ್ರ ಅವರ ಮೇಲೆ ರಾಸಾಯನಿಕ ಪದಾರ್ಥ ಎರಚಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಜೆ.ಪಿ.ನಗರ ನಿವಾಸಿ ಆದಿ ನಾರಾಯಣ ಎಂಬಾತನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಆರೋಪಿಯ ಪ್ರಾಥಮಿಕ ವಿಚಾರಣೆಯಲ್ಲಿ ಹತ್ಯೆಗೈಯಲೆಂದೇ, ರಾಸಾಯನಿಕ ಪದಾರ್ಥ ಬಳಸಿ, ಕರಗ ಹೊತ್ತಿದ್ದಾಗ ಜ್ಞಾನೇಂದ್ರ ಅವರ ಮೇಲೆ ಎಸೆದಿರುವುದು ಬೆಳಕಿಗೆ ಬಂದಿದೆ. ಮತ್ತೂಬ್ಬ ಆರೋಪಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಜ್ಞಾನೇಂದ್ರ ಮತ್ತು ಆರೋಪಿ ಆದಿನಾರಾಯಣ ಕುಟುಂಬದವರದ್ದು ಈ ಹಿಂದಿನಿಂದಲೂ ಕರಗ ಹೊರುವ ವಿಚಾರದಲ್ಲಿ ಪೈಪೋಟಿ ಇದೆ. ಕೋರ್ಟ್ ಮೆಟ್ಟಿಲು ಕೂಡ ಹತ್ತಿದ್ದಾರೆ. ಕರಗ ಹೊರಲು ಅರ್ಚಕರ ನಡುವೆ ಪೈಪೋಟಿ ನಡೆಯುತ್ತಲೇ ಇದೆ. ಕಾರಣ ಕರಗ ಹೊರುವ ಅರ್ಚಕರಿಗೆ ನೀಡುವ ದುಬಾರಿ ಗೌರವಧನ. ಹೀಗಾಗಿ ಕರಗ ಹೊರುವ ಅರ್ಚಕರ ನಡುವೆ ವಾದ-ಪ್ರತಿವಾದಗಳು ಇದ್ದೇ ಇರುತ್ತದೆ. ಅದೇ ರೀತಿ ಈ ವರ್ಷ ಕೂಡ ಚರ್ಚೆಯಲ್ಲಿತ್ತು. ಆಗ ದೇವಸ್ಥಾನ ಮಂಡಳಿಯ ಹಿರಿಯರು ಕೋರ್ಟ್ ಸೂಚನೆ ಮೇರೆಗೆ ಜ್ಞಾನೇಂದ್ರ ಅವರಿಗೆ ಈ ಬಾರಿಯ ಕರಗ ಹೊರುವ ಅವಕಾಶ ನೀಡಿದ್ದರು.
ಕರಗ ಉತ್ಸವ ವೇಳೆ ಸಂಪ್ರದಾಯಿಕವಾಗಿ ಹೂ, ಮೆಣಸಿನಕಾಳು, ಕಲ್ಲುಪ್ಪು ಸೇರಿ ಕೆಲ ಪದಾರ್ಥ ಗಳನ್ನು ಹರಕೆಯ ಹೆಸರಿಲ್ಲಿ ಭಕ್ತರು ಕರಗದ ಮೇಲೆ ಎಸೆಯುತ್ತಾರೆ. ಅದನ್ನು ದುರುಪಯೋಗ ಪಡಿಸಿಕೊಂಡು ಆದಿನಾರಾಯಣ ಏ.6ರಂದು ನಡೆದ ಕರಗ ಮಹೋತ್ಸವ ಸಂದರ್ಭದಲ್ಲಿ ಜ್ಞಾನೇಂದ್ರ ಅವರ ಮೇಲೆ ರಾಸಾಯನಿಕ ವಸ್ತು ಮತ್ತು ಖಾರದ ಪುಡಿ ಮಿಶ್ರಣದ ವಸ್ತು ಎಸೆದಿದ್ದಾರೆ. ಅದರಿಂದ ಜ್ಞಾನೇಂದ್ರ ಅವರಿಗೆ ಉರಿ ಹೆಚ್ಚಾಗಿದ್ದು, ಪಕ್ಕದಲ್ಲಿದ್ದ ವೀರಕುಮಾರರಿಗೆ ತಿಳಿಸಿದ್ದಾರೆ.
ಆರೋಪಿ ಆದಿನಾರಾಯಣ ತಪ್ಪಿಸಿಕೊಳ್ಳುವುದನ್ನು ಗಮನಿಸಿದ ವೀರಕುಮಾರರು ಆತನನ್ನು ಹಿಡಿದು ಥಳಿಸಿ ಮಂಡಳಿ ಸದಸ್ಯರ ವಶಕ್ಕೆ ನೀಡಿದ್ದರು. ಈ ಸಂಬಂಧ ಕೆಲ ದಿನಗಳ ಹಿಂದೆ ದೇವಾಲಯದ ಮಂಡಳಿ ಸದಸ್ಯರು ನೀಡಿದ ದೂರಿನ ಮೇರೆಗೆ ಆದಿನಾರಾಯಣನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.