Advertisement
ಬೆಂಗಳೂರು: ಪತ್ನಿ ಮತ್ತು ಆಕೆಯ ಕುಟುಂಬದವರ ಕಿರುಕುಳಕ್ಕೆ ಬೇಸತ್ತು ಖಾಸಗಿ ಕಂಪನಿ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಅದೇ ಮಾದರಿಯ ಮತ್ತೂಂದು ದುರ್ಘಟನೆ ನಡೆದಿದೆ.
Related Articles
Advertisement
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹಂದಿಗ ನೂರು ಗ್ರಾಮದ ತಿಪ್ಪಣ್ಣ 2016ನೇ ಬ್ಯಾಚ್‌ನ ಕಾನ್ ಸ್ಟೇಬಲ್. ಈ ಮೊದಲು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಈ ಮಧ್ಯೆ ಹೆಡ್‌ಕಾನ್‌ಸ್ಟೇಬಲ್ ಆಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡು ಹುಳಿಮಾವು ಠಾಣೆಯಲ್ಲಿ 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಹನುಮ ಜಯಂತಿ ಹಿನ್ನೆಲೆಯಲ್ಲಿ ಅರಕೆರೆಯ ದೇವಸ್ಥಾನದ ಬಳಿ ಅವರನ್ನು ಕರ್ತವ್ಯ ನಿಯೋಜಿಸಲಾಗಿತ್ತು.
ರಾತ್ರಿ ಕರ್ತವ್ಯ ಮುಗಿಸಿಕೊಂಡು, ಠಾಣೆಗೆ ಬಂದು ಸಹಿ ಹಾಕಿ, ಬಳಿಕ ಮನೆಗೆ ಹೋದ ತಿಪ್ಪಣ್ಣ, ಬಟ್ಟೆ ಬದಲಿಸಿ ಡೆತ್‌ನೋಟ್ ಬರೆದಿಟ್ಟು ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು.
ಕೌಟುಂಬಿಕ ವಿಚಾರಕ್ಕೆ ಆತ್ಮಹತ್ಯೆ: 2022ರಲ್ಲಿ ಯಾದಗಿರಿ ಜಿಲ್ಲೆ ಸುರಪೂರ ತಾಲೂಕಿನ ಪಾರ್ವತಿ ಎಂಬಾಕೆ ಜತೆ ಮದುವೆಯಾಗಿದ್ದು, ದಂಪತಿಗೆ ಮಕ್ಕಳು ಇರಲಿಲ್ಲ. ಮದುವೆಯಾದ ಕೆಲ ದಿನಗಳಲ್ಲೇ ಇಬ್ಬರ ನಡುವೆ ಕೌಟುಂಬಿಕ ವಿಚಾರಕ್ಕೆ ಜಗಳ ಆಗಿತ್ತು. ಹೀಗಾಗಿ ಪತ್ನಿ ಪಾರ್ವತಿ ತವರು ಮನೆಯಲ್ಲೇ ಇದ್ದರು. ಈ ಮಧ್ಯೆ ಪತ್ನಿ ಮತ್ತು ಆಕೆಯ ತಂದೆ ಯಮ ನಪ್ಪ ಪದೇ ಪದೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ತಿಪ್ಪಣ್ಣ ಡೆತ್ ನೋಟ್‌ನಲ್ಲಿ ಆರೋಪಿಸಿದ್ದಾರೆ.
ನೀನು ಸತ್ತರೆ ಪುತ್ರಿ ಚೆನ್ನಾಗಿರುತ್ತಾಳೆ ಎಂದಿದ್ದ ಮಾವ: ಡೆತ್‌ನೋಟ್! “ನಾನು ನನ್ನ ಹೆಂಡತಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಮಾವ ಯಮನಪ್ಪ ಇವನು ನನಗೆ ಜೀವ ಬೆದರಿಕೆ ಹಾಕಿದ್ದಾನೆ. ಡಿ.12ರಂದು ಬೆಳಗ್ಗೆ 7.16ಕ್ಕೆ ಕರೆ ಮಾಡಿದ ಯಮನಪ್ಪ, ನೀನು ಸತ್ತು ಹೋಗು ನನ್ನ ಮಗಳು ಚೆನ್ನಾಗಿರುತ್ತಾಳೆ’ ಎಂದು ನಿಂದಿಸಿದ್ದಾನೆ. “ಸತ್ತು ಹೋಗು ಇಲ್ಲವಾದರೆ, ನಾವೇ ನಿನ್ನನ್ನು ಸಾಯಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದಾನೆ. ನನ್ನ ಸಾವಿಗೆ ನನ್ನ ಹೆಂಡತಿ ಮತ್ತು ನನ್ನ ಮಾವ ಯಮನಪ್ಪ ಅವರೇ ನೇರ ಕಾರಣವಾಗಿದ್ದಾರೆ. ಇನ್ನು ಪತ್ನಿ ಮತ್ತು ಈಕೆಯ ಸಹೋದರ ಮಾಳಪ್ಪನ ಮೊಬೈಲ್ ನಂಬರ್ ಬರೆದಿರುವ ತಿಪ್ಪಣ್ಣ, ನನ್ನ ಬೈಕ್ ಹುಸ್ಕೂರು ಹೋಗುವ ರೈಲ್ವೆ ಹಳಿ ಹತ್ತಿರ ನಿಲ್ಲಿಸಿರುತ್ತೇನೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದಾರೆ.
3 ವರ್ಷದಿಂದ ಪ್ರತ್ಯೇಕವಾಗಿದ್ದ ದಂಪತಿ? 2022ರಲ್ಲಿ ತಿಪ್ಪಣ್ಣ ಮತ್ತು ಪಾರ್ವತಿ ಮದುವೆಯಾಗಿದ್ದು, ಕೆಲ ದಿನಗಳು ಮಾತ್ರ ಜತೆಯಲ್ಲಿ ಇದ್ದರು. ಆ ಬಳಿಕ ಪಾರ್ವತಿ ತನ್ನ ತವರು ಮನೆ ಸೇರಿಕೊಂಡಿದ್ದರು. ಅಂದಿನಿಂದ ತಿಪ್ಪಣ್ಣ ಪತ್ನಿಯನ್ನು ವಾಪಸ್ ಕರೆದುಕೊಂಡು ಬಂದಿಲ್ಲ. ಮತ್ತೂಂದೆಡೆ ತಿಪ್ಪಣ್ಣಗೆ ಮದುವೆಗೂ ಮೊದಲು ಬೇರೊಂದು ಯುವತಿ ಜತೆ ಲಿವಿಂಗ್ ಟು ಗೆದರ್‌ನಲ್ಲಿ ಇದ್ದರು ಎಂದು ಹೇಳಲಾಗಿದೆ. ಆದರೂ ಮನೆಯವರು ಒತ್ತಾಯಕ್ಕೆ ಪಾರ್ವತಿಯನ್ನು ಮದುವೆಯಾಗಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಕೆಲ ಗೊಂದಲಗಳಿವೆ. ಸದ್ಯ ತಿಪ್ಪಣ್ಣನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಬಳಿಕ ಅವರ ಹೇಳಿಕೆ ಪಡೆಯಲಾಗುತ್ತದೆ ಎಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಘಟನೆ?
ಹುಳಿಮಾವು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಪ್ಪಣ್ಣ
ಶುಕ್ರವಾರ ಹನುಮ ಜಯಂತಿ ಪ್ರಯುಕ್ತ ಅರಕೆರೆಯಲ್ಲಿ ಕರ್ತವ್ಯ
ಕೆಲಸ ಮುಗಿಸಿ ಠಾಣೆಗೆ ಬಂದು ಸಹಿ ಹಾಕಿ ಮನೆಗೆ ತೆರಳಿದ್ದ ತಿಪ್ಪಣ್ಣ
ಮನೆಯಲ್ಲಿ ಬಟ್ಟೆ ಬದಲಿಸಿ ಡೆತ್‌ನೋಟ್ ಬರೆದಿಟ್ಟ ಪೊಲೀಸ್
ಬಳಿಕ ಹುಸ್ಕೂರು ರೈಲ್ವೆ ಗೇಟ್‌ನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ