ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಸೇರಿದ 50 ಲಕ್ಷ ರೂ. ಕದ್ದು ಪರಾರಿಯಾಗಿದ್ದ ಕಾರು ಚಾಲಕನನ್ನು ಕೋರಮಂಗಲ ಪೊಲೀಸರು ಪ್ರಕರಣ ದಾಖಲಾದ ಕೆಲವೇ ಗಂಟೆಯಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ರಕ್ಷಿತ್ ಕುಮಾರ್ (35) ಬಂಧಿತ ಆರೋಪಿ. ಈತನಿಂದ 50 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಕೋರ ಮಂಗಲದ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಟಾರೆಡ್ಡಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ದೂರುದಾರ ಸುಬ್ಟಾರೆಡ್ಡಿ ಹಲವಾರು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ. ಈ ಮಧ್ಯೆ ಪರಿಚಯಸ್ಥರ ಮೂಲಕ ರಕ್ಷಿತ್ ಕುಮಾರ್ 8 ತಿಂಗಳ ಹಿಂದಷ್ಟೇ ಸುಬ್ಟಾರೆಡ್ಡಿಯ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಶುಕ್ರವಾರ ಬೆಳಗ್ಗೆ ಸುಬ್ಟಾರೆಡ್ಡಿ ವ್ಯವಹಾರದ ನಿಮಿತ್ತ ತಮ್ಮ ಸ್ನೇಹಿತರಿಂದ 50 ಲಕ್ಷ ರೂ. ಅನ್ನು ಪಡೆದು ಕಾರಿನಲ್ಲಿ ಇಟ್ಟು ಮನೆಗೆ ಊಟಕ್ಕೆ ಹೋಗಿದ್ದರು.
ಅದೇ ಸಮಯಕ್ಕೆ ಕಾಯುತ್ತಿದ್ದ ಆರೋಪಿ, ಕಾರಿನಲ್ಲಿದ್ದ ಹಣದ ಬ್ಯಾಗ್ ಅನ್ನು ಕಳವು ಮಾಡಿದ್ದಾನೆ. ಬಳಿಕ ಮನೆಯ ಸೆಕ್ಯುರಿಟಿ ಗಾರ್ಡ್ಗೆ ಕಾರಿನ ಕೀ ಕೊಟ್ಟು ಪರಾರಿಯಾಗಿದ್ದ. ಕೆಲ ಹೊತ್ತಿನ ಬಳಿಕ ಕಾರಿನ ಬಳಿ ಬಂದ ಸುಬ್ಟಾರೆಡ್ಡಿ, ಕಾರು ಚಾಲಕನ ಬಗ್ಗೆ ಸೆಕ್ಯುರಿಟಿ ಗಾರ್ಡ್ಗೆ ಕೇಳಿದಾಗ, ಕೀ ಕೊಟ್ಟು ಹೋದ ಬಗ್ಗೆ ತಿಳಿಸಿದ್ದಾನೆ. ಅದರಿಂದ ಗಾಬರಿಗೊಂಡ ಸುಬ್ಟಾರೆಡ್ಡಿ ಕಾರಿನ ಒಳಗೆ ಹೋಗಿ ಪರಿಶೀಲಿಸಿದಾಗ ಹಣದ ಬ್ಯಾಗ್ ನಾಪತ್ತೆಯಾಗಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಕೋರಮಂಗಲ ಠಾಣೆಯ ಇನ್ಸ್ಪೆಕ್ಟರ್ ನಟರಾಜ್ ಮತ್ತು ಪಿಎಸ್ಐ ಮಾದೇಶ್ ನೇತೃತ್ವದ ತಂಡ ಎಫ್ ಐಆರ್ ದಾಖಲಿಸಿಕೊಂಡು ನಾಲ್ಕೈದು ಗಂಟೆಯಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕದ್ದ ಬಳಿಕ ಓಲಾ ಕ್ಯಾಬ್ನಲ್ಲಿ ಪರಾರಿ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಪೊಲೀ ಸರು ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ದಾಗ ಆರೋಪಿ ಓಲಾ ಕ್ಯಾಬ್ನಲ್ಲಿ ಪರಾರಿಯಾಗಿರುವುದು ಗೊತ್ತಾಗಿದೆ. ಬಳಿಕ ಓಲಾ ಕ್ಯಾಬ್ ಸಂಸ್ಥೆಗೆ ಮಾಹಿತಿ ನೀಡಿ, ಕಾರು ಚಾಲನ ನಂಬರ್ ಪಡೆದು, ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ವಿಚಾರಣೆಯಲ್ಲಿ ತಂಗಿ ಮದುವೆಗೆ ಮಾಡಿಕೊಂಡಿದ್ದ ಸಾಲ ತೀರಿಸಲು ಹಾಗೂ ಮನೆಯ ಆರ್ಥಿಕ ಸಮಸ್ಯೆಯಿಂದಾಗಿ ಕೃತ್ಯ ಎಸಗಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.