Advertisement

ಲಾಕಪ್‌ಡೆತ್‌: ಹೆಡ್‌ ಕಾನ್‌ಸ್ಟೆಬಲ್‌ ಸೇರಿ ನಾಲ್ವರು ಪೊಲೀಸರಿಗೆ 7 ವರ್ಷ ಜೈಲು

11:19 PM Nov 27, 2024 | Team Udayavani |

ಬೆಂಗಳೂರು: ಜೀವನ ಭೀಮಾನಗರ ಪೊಲೀಸ್‌ ಠಾಣೆಯಲ್ಲಿ 2016 ನಡೆದಿದ್ದ ಮಹೇಂದ್ರ ರಾಥೋಡ್‌ ಲಾಕಪ್‌ಡೆತ್‌ ಪ್ರಕರಣದಲ್ಲಿ ಓರ್ವ ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಮೂವರು ಕಾನ್‌ಸ್ಟೆಬಲ್‌ಗ‌ಳಿಗೆ 51ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಸಿ.ಐ.ಡಿ ವಿಶೇಷ ನ್ಯಾಯಾಲಯ) 7 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿದೆ.

Advertisement

2016ರಲ್ಲಿ ಜೀವನ ಭೀಮಾನಗರ ಪೊಲೀಸ್‌ ಠಾಣೆಯ ಅಪರಾಧ ವಿಭಾಗ ಸಿಬ್ಬಂದಿಗಳಾದ ಹೆಡ್‌ಕಾನ್‌ಸ್ಟೆಬಲ್‌ ಏಜಾಜ್‌ ಖಾನ್‌(ಹಾಲಿ ಹಲಸೂರು ಸಂಚಾರ ಪೊಲೀಸ್‌ ಠಾಣೆ), ಕಾನ್‌ಸ್ಟೆಬಲ್‌ಗ‌ಳಾದ ಕೇಶವ ಮೂರ್ತಿ (ಹಾಲಿ ರಾಮಮೂರ್ತಿನಗರ ಪೊಲೀಸ್‌ ಠಾಣೆ), ಮೋಹನ್‌ ರಾಮ್ (ಇಂದಿರಾನಗರ ಸಂಚಾರ ಪೊಲೀಸ್‌ ಠಾಣೆ), ಸಿದ್ದಪ್ಪ ಬೊಮ್ಮನಹಳ್ಳಿ (ಇಂದಿರಾನಗರ ಪೊಲೀಸ್‌ ಠಾಣೆ) ಶಿಕ್ಷೆಗೊಳಗಾದ ಅಪರಾಧಿಗಳು. ಮಹೇಂದ್ರ ರಾಥೋಡ್‌ ಲಾಕಪ್‌ಡೆತ್‌ನಲ್ಲಿ ಮೃತಪಟ್ಟ ವ್ಯಕ್ತಿ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕೃಷ್ಣವೇಣಿ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ:
2016ರ ಮಾ.19ರಂದು ಜೀವನ್‌ ಭೀಮಾನಗರ ಪೊಲೀಸ್‌ ಠಾಣೆಯ ಪೊಲೀಸರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಹೇಂದ್ರ ರಾಥೋಡ್‌ ಎಂಬಾತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಠಾಣೆಯ ಇನ್‌ಸ್ಪೆಕ್ಟರ್‌ ಕ್ರಿಕೆಟ್‌ ಬಂದೋಬಸ್ತ್ ಸಲುವಾಗಿ ಠಾಣೆಯಿಂದ ಹೊರಗೆ ಹೋದ ನಂತರ ಶಿಕ್ಷೆಗೊಳಗಾದ ನಾಲ್ವರು ಪೊಲೀಸ್‌ ಸಿಬ್ಬಂದಿ ವಿಚಾರಣೆ ಸಲುವಾಗಿ ರಾಥೋಡ್‌ಗೆ ದೈಹಿಕ ಹಲ್ಲೆ ನಡೆಸಿ ಹಿಂಸಿಸಿದ್ದರು. ಪರಿಣಾಮ ಗಂಭೀರ ಹಲ್ಲೆಗೊಳಗಾದ ರಾಥೋಡ್‌ ಠಾಣೆಯಲ್ಲೇ ಮೃತಪಟ್ಟಿದ್ದ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸಿಐಡಿ ಪೊಲೀಸರು ತನಿಖೆ ನಡೆಸಿದ್ದರು. ಆಗ ಮರಣೋತ್ತರ ಪರೀಕ್ಷೆಯಲ್ಲಿ ದೇಹದ ಒಳಗಡೆ ಪ್ರಮುಖ ಅಂಗಗಳಿಗೆ ರಕ್ತದ ಮೂಲಕ ಸರಬರಾಜಾಗುವ ಆಮ್ಲಜನಕದ ಕೊರತೆ ಕಾರಣದಿಂದ ಮೃತಪಟ್ಟಿರುವುದಾಗಿ ವೈದ್ಯರು ಅಭಿಪ್ರಾಯ ನೀಡಿದ್ದರು.

ಇದು ಅನುವಂಶಿಯವಾಗಿಯೂ ಬರುವ ಸಾಧ್ಯತೆ ಇದ್ದು. ಇದನ್ನು ದೃಢಪಡಿಸಿಕೊಳ್ಳಲು ಮೃತ ಮಹೇಂದ್ರ ರಾಥೋಡ್‌ನ‌ ಇಬ್ಬರು ಮಕ್ಕಳ ಸ್ಯಾಂಪಲ್‌ ರಕ್ತವನ್ನು ಪಡೆದು ಮೃತನ ಸ್ಯಾಂಪಲ್‌ ರಕ್ತದೊಂದಿಗೆ ತಜ್ಞರಿಂದ ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಲಕ್ಷಣಗಳು ಕಂಡುಬರದ ಕಾರಣ ನಾಲ್ವರು ಪೊಲೀಸರು ಹಲ್ಲೆ ನಡೆಸಿ ಕೊಲೆ ಮಾಡಿರುವುದು ಕಂಡು ಬಂದಿತ್ತು.

ಅದೇ ರೀತಿ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ನೀಡಿರುವ ಅಂತಿಮ ಅಭಿಪ್ರಾಯದಲ್ಲೂ, ಜೀವಂತವಿದ್ದಾಗ ಸೂಕ್ಷ್ಮ ಭಾಗಗಳಲ್ಲಿ ಆಗಿರುವ ಗಾಯಗಳು ಹಾಗೂ ಬಲಪಾದದಲ್ಲಿನ ಮೂಳೆ ಮುರಿತಗಳಿಂದ ಉಂಟಾದ ದೈಹಿಕ ಒತ್ತಡದಿಂದ ಎಲ್ಲಾ ಒಳ ಪ್ರಮುಖ ಅಂಗಾಂಗಗಳಲ್ಲಿ (ಮೆದುಳು. ಮೂತ್ರಪಿಂಡ, ಹೃದಯ, ಶ್ವಾಸಕೋಶ) ತೊಂದರೆಯಿಂದಾಗಿ ಮರಣ ಸಂಭವಿಸಿರುವುದಾಗಿ ವರದಿ ನೀಡಿದ್ದರು.

Advertisement

ಲಾಠಿ ಮತ್ತು ರೋಲರ್‌ಗಳಿಂದ ಹೊಡೆದಿರುವ ಸಾಧ್ಯತೆಗಳಿವೆ ಎಂದು ವೈದ್ಯರು ಅಭಿಪ್ರಾಯ ನೀಡಿದ್ದರು. ಮೃತಪಟ್ಟ ವೇಳೆ ರಾಥೋಡ್‌ನ‌ನ್ನು ಸಂಜೆ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ನೋಂದಣಿ ರಿಜಿಸ್ಟ್ರರ್‌ನಲ್ಲಿ ಆತನ ಎರಡೂ ಕಾಲಿನ ಪಾದಗಳು, ಎರಡೂ ಕಾಲನ ಮೊಣಕಾಲಿನ ಸಂಧಿಯಲ್ಲಿ ಹಾಗೂ ಎರಡೂ ಭುಜಗಳ ಮೇಲೆ, ಎರಡೂ ದವಡೆಗಳ ಕೆಳಭಾಗ ಊದಿಕೊಂಡಿದ್ದು, ಚರ್ಮದ ಬಣ್ಣ ನೀಲಿಗಟ್ಟಿರುವುದಾಗಿ ನಮೂದಿಸಿರುವುದು ದಾಖಲಾತಿಗಳಿಂದ ಸಾಬೀತಾಗಿತ್ತು. ಸಿಐಡಿ ಪೊಲೀಸರು ಈ ಕುರಿತು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ಏನಿದು ಘಟನೆ?
-ಜೀವನ್‌ ಭೀಮಾನಗರದಲ್ಲಿ ರಾಥೋಡ್‌ ಶಂಕಾಸ್ಪದವಾಗಿ ಸಂಚಾರ
-ಆತನನ್ನು ಪೊಲೀಸ್‌ ಠಾಣೆಗೆ ಕರೆ ತಂದು ಪೊಲೀಸರು
-ವಿಚಾರಣೆ ವೇಳೆ ರಾಥೋಡ್‌ಗೆ ದೈಹಿಕವಾಗಿ ತೀವ್ರ ಹಲ್ಲೆ
-ಠಾಣೆಯಲ್ಲೇ ಮೃತಪಟ್ಟಿದ್ದ ಮಹೇಂದ್ರ ರಾಥೋಡ್‌
-ಲಾಕಪ್‌ಡೆತ್‌ ಕೇಸ್‌ ದಾಖಲು, ಸಿಐಡಿಯಿಂದ ತನಿಖೆ
-ಮರಣೋತ್ತರ ಪರೀಕ್ಷೆಯಲ್ಲಿ ಗಂಭೀರ ಗಾಯಗಳಾಗಿರುವುದು ದೃಢ
-ಲಾಠಿ, ರೋಲರ್‌ಗಳಿಂದ ಹೊಡೆದಿರುವ ಬಗ್ಗೆ ವರದಿ ನೀಡಿದ್ದ ವೈದ್ಯರು
-ಘಟನೆ ನಡೆದು 8 ವರ್ಷಗಳ ಬಳಿಕ ನಾಲ್ವರು ಪೊಲೀಸರಿಗೆ ಜೈಲು ಶಿಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next