Advertisement

ಹಾಡಹಗಲೇ ಒಂಟಿ ಮಹಿಳೆಯ ಭೀಕರ ಕೊಲೆ : 17ಕ್ಕೂ ಹೆಚ್ಚು ಬಾರಿ ಇರಿದಿದ್ದ ದುಷ್ಕರ್ಮಿ

07:37 PM Oct 20, 2021 | Team Udayavani |

ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿದ್ದ ದುಷ್ಕರ್ಮಿ ಒಂಟಿ ಮಹಿಳೆಯನ್ನು ಕತ್ತರಿ, ಚಾಕುವಿನಿಂದ ಇರಿದು ಕೊಲೆಗೈದು, ಬಳಿಕ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿರುವ ಭೀಕರ ಘಟನೆ ಬನಶಂಕರಿಯಲ್ಲಿ ಮಂಗಳವಾರ ನಡೆದಿದೆ.

Advertisement

ಬನಶಂಕರಿಯ ಯಾರಬ್‌ ನಗರ ನಿವಾಸಿ ಅಫ್ರೀನಾಖಾನಂ (28) ಕೊಲೆಯಾದ ಮಹಿಳೆ. ಘಟನೆ ಸಂಬಂಧ ಮಹಿಳೆಯ ಪತಿ ಲಾಲುಖಾನ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಮಂಗಳವಾರ ಮಧ್ಯಾಹ್ನ ಕೃತ್ಯ ನಡೆದಿದ್ದು, ಸಂಜೆ 6 ಗಂಟೆ ಸುಮಾರಿಗೆ ಮನೆಯಿಂದ ಬರುತ್ತಿದ್ದ ಹೊಗೆ ಕಂಡು ಸ್ಥಳೀಯರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪರಿಚಯಸ್ಥರೇ ಕೃತ್ಯ ಎಸಗಿರುವ ಸಾಧ್ಯತೆಯಿದ್ದು, ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಗುರಪ್ಪನಪಾಳ್ಯದಲ್ಲಿರುವ ಟಿಂಬರ್‌ ಯಾರ್ಡ್‌ನಲ್ಲಿ ಕೆಲಸ ಮಾಡುವ ಲಾಲುಖಾನ್‌ ಎಂಟು ವರ್ಷಗಳ ಹಿಂದೆ ಅಫ್ರೀನಾ ಖಾನಂರನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಫ್ರೀನಾಖಾನಂ  ಮನೆಯಲ್ಲಿಯೇ ಟೈಲರಿಂಗ್‌ ಕೆಲಸ ಮಾಡಿಕೊಂಡಿದ್ದರು. ದಂಪತಿ ಮಕ್ಕಳ ಜತೆ ಯಾರಬ್‌ನಗರದಲ್ಲಿ ಪಾಷಾ ಎಂಬವರ ಮನೆಯನ್ನು ಭೋಗ್ಯಕ್ಕೆ ಪಡೆದು ವಾಸವಾಗಿದ್ದರು.

ಈ ಮಧ್ಯೆ ಪತಿ ಲಾಲುಖಾನ್‌,ಪತ್ನಿಯ ಮೇಲೆ ಅನುಮಾನಿಸಿ ಆರೇಳು ತಿಂಗಳಿಂದ ಜಗಳ ಮಾಡುತ್ತಿದ್ದು, ಹಲ್ಲೆ ಕೂಡ ನಡೆಸುತ್ತಿದ್ದ. ಮಂಗಳವಾರ ಬೆಳಗ್ಗೆ ಕೂಡ ದಂಪತಿ ನಡುವೆ ವಾಗ್ವಾದ ನಡೆದಿದ್ದು, ಪತಿ ಟಿಂಬರ್‌ ಯಾರ್ಡ್‌ಗೆ ಕೆಲಸಕ್ಕೆ ಹೋಗಿದ್ದಾನೆ. ಅಫ್ರೀನಾಖಾನ್‌ ಮನೆಯಲ್ಲಿ ಒಬ್ಬರೇ ಟೈಲರಿಂಗ್‌ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪರಿಚಯಸ್ಥನೊಬ್ಬ ಮನೆಗೆ ಬಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

17 ಕ್ಕೂ ಹೆಚ್ಚು ಬಾರಿ ಇರಿದು ಕೊಲೆ

Advertisement

ಈ ವೇಳೆ ಮಹಿಳೆ ಜತೆ ಜಗಳ ಮಾಡಿರುವ ವ್ಯಕ್ತಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾನೆ. ಬಳಿಕ ಆಕೆಯನ್ನು ಹಾಸಿಗೆ ಮೇಲೆ ತಳ್ಳಿ, ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಮೊದಲಿಗೆ ಕುತ್ತಿಗೆ, ಹೊಟ್ಟೆ, ಮಖ, ಕೈ, ಕಾಲುಗಳಿಗೆ ನಾಲ್ಕೈದು ಬಾರಿ ಇರಿದಿದ್ದು, ಚಾಕು ಬೆಂಡ್‌ ಆಗಿದ್ದರಿಂದ ಅದನ್ನು ಬಿಸಾಡಿದ್ದಾನೆ. ಅನಂತರ ಅಲ್ಲೇ ಇದ್ದ ಕತ್ತರಿಯಿಂದ ಕುತ್ತಿಗೆ ಭಾಗಕ್ಕೆ ನಾಲ್ಕು ಬಾರಿ ಮತ್ತು ಹೊಟ್ಟೆಗೆ 9 ಬಾರಿ ಹೀಗೆ ದೇಹದ ವಿವಿಧೆಡೆ 17ಕ್ಕೂ ಹೆಚ್ಚು ಬಾರಿ ಇರಿದು ಭೀಕರವಾಗಿ ಇರಿದು ಕೊಲೆಗೈದಿದ್ದಾನೆ. ಬಳಿಕ ಮನೆಯ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.

ಇದನ್ನೂ ಓದಿ :ಸಫಾಯಿ ಕರ್ಮಚಾರಿ ಸಾವು; ಸಾಂತ್ವನ ಹೇಳಲು ಬಂದ ಪ್ರಿಯಾಂಕಾಗೆ ತಡೆ

ಸಾಕ್ಷ್ಯನಾಶಕ್ಕೆ ಯತ್ನ

ಅನಂತರ ಬಟ್ಟೆಗಳನ್ನು ಗ್ಯಾಸ್‌ ಸ್ಟೌವ್‌ನಿಂದ ಸುಟ್ಟಿ ಆ ಬಟ್ಟೆಗಳನ್ನು ಹಾಸಿಗೆ ಮೇಲಿದ್ದ ಆಕೆಯ ಶವದ ಮೇಲೆ ಎಸೆದಿದ್ದಾನೆ. ಪರಿಣಾಮ ಆಕೆಯ ದೇಹ ಶೇ.30ರಷ್ಟು ಸುಟ್ಟಿದ್ದು, ಅರ್ಧ ಹಾಸಿಗೆ ಕೂಡ ಸುಟ್ಟಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದಟ್ಟವಾದ ಹೊಗೆಯಿಂದ ಘಟನೆ ಬೆಳಕಿಗೆ

ಮಂಗಳವಾರ ಸಂಜೆ ಆರು ಗಂಟೆ ಸುಮಾರಿಗೆ ಅಫ್ರೀನಾಖಾನಂ ಮನೆಯಿಂದ ದಟ್ಟವಾದ ಹೊಗೆ ಬರುತ್ತಿತ್ತು. ಅದನ್ನು ಗಮನಿಸಿದ ಸ್ಥಳೀಯರು ಆಕೆಯ ಸಹೋದರ ಇಮ್ರಾನ್‌ಗೆ ಮಾಹಿತಿ ನೀಡಿದ್ದಾರೆ. ಆತ ತನ್ನ ಬಾವ ಲಾಲುಖಾನ್‌ಗೆ ಮಾಹಿತಿ ನೀಡಿದ್ದಾನೆ. ಅಷ್ಟರಲ್ಲಿ ಸ್ಥಳೀಯರ ಜತೆ ಸೇರಿಕೊಂಡು ಇಮ್ರಾನ್‌ ಬಾಗಿಲು ಮುರಿದು ಒಳ ಹೋಗಿದ್ದು, ನೀರು ಹಾಕಿ ಹೊಗೆ ಆರಿಸಿದ್ದು, ಹಾಸಿಗೆ ಮೇಲೆ ಮೃತ ದೇಹ ಬಿದ್ದಿರುವುದು ಕಂಡುಬಂದಿದೆ. ವಿಷಯ ತಿಳಿದು ಬನಶಂಕರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪತಿ ಲಾಲುಖಾನ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ. ಪತ್ನಿ ಬೇರೊಬ್ಬ ಪುರುಷನ ಜತೆ ಆತ್ಮೀಯತೆ ಹೊಂದಿದ್ದಾರೆ ಎಂದು ಶಂಕಿಸಿ ಲಾಲುಖಾನ್‌ ಜಗಳ ಮಾಡುತ್ತಿದ್ದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಮತ್ತೂಂದೆಡೆ ಘಟನೆ ವೇಳೆ ಲಾಲುಖಾನ್‌ ಕೆಲಸದ ಸ್ಥಳದಲ್ಲೇ ಇದ್ದ ಎಂಬುದು ಪತ್ತೆಯಾಗಿದೆ. ಹೀಗಾಗಿ ಆಕೆಗೆ ಪರಿಚಯಸ್ಥನೇ ಕೃತ್ಯ ಎಸಗಿದ್ದಾನೆ ಎಂಬ ಅನುಮಾನವಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next