ಬೆಂಗಳೂರು: ಆಸ್ತಿ ವಿಚಾರಕ್ಕೆ ಸೋದರ ಅತ್ತೆಯನ್ನೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದ ಆರೋಪ ದಡಿ ಇಬ್ಬರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆ ನಿವಾಸಿ ಸೋಮಿನಿ ಸತ್ಯಭಾಮಾ(46) ಕೊಲೆಯಾದವರು. ಈ ಸಂಬಂಧ ಕೊಲೆಯಾದ ಮಹಿಳೆಯ ಅಣ್ಣನ ಮಗ ಚಾಮರಾಜಪೇಟೆ ನಿವಾಸಿಗಳಾದ ಸಾಗರ್(25) ಮತ್ತು ದೂರದ ಸಂಬಂಧಿ ಅಕಾಶ್(26) ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕೊಲೆಯಾದ ಸತ್ಯಭಾಮಾ ವೃತ್ತಿಯಲ್ಲಿ ಸ್ಟಾಫ್ ನರ್ಸ್ ಆಗಿದ್ದು, ಐಟಿಸಿ ವಿಂಡ್ಸರ್ ಮ್ಯಾನರ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳಲು ಹೋಟೆಲ್ ಪಾರ್ಕಿಂಗ್ ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಏಕಾಏಕಿ ಆಕೆಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಸತ್ಯಭಾಮಾ ಆಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದರು. ಕೊಲೆಯಾದ ಸತ್ಯಭಾಮಾ ಮತ್ತು ಆರೋಪಿ ಆಕಾಶ್ ಮನೆಯವರಿಗೂ ಆಸ್ತಿ ವಿಚಾರವಾಗಿ ಹಲವು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಆಕಾಶ್ ಹಾಗೂ ಸಾಗರ್ ಸಂಚು ರೂಪಿಸಿ ಕಾದು ಸತ್ಯಭಾಮಾ ಅವರನ್ನು ಕೊಲೆ ಮಾಡಿದ್ದಾಾರೆ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.