ಬೆಂಗಳೂರು : ಪ್ರೀತಿಯ ಪತ್ನಿಗಾಗಿ ಮನೆ ಕಳ್ಳತನ ಮಾಡಿ, ಕುಟುಂಬವನ್ನು ಕಾಶ್ಮೀರ ಸೇರಿ ಪ್ರವಾಸಿ ತಾಣಗಳಿಗೆ ಕರೆದೊಯ್ಯುತ್ತಿದ್ದ ಐಷಾರಾಮಿ ಕಳ್ಳನೊಬ್ಬ ಗೋವಿಂದರಾಜನಗರ ಪೊಲೀಸರಿಗೆ ಸಿಕ್ಕಿ ಬಿದಿದ್ದಾನೆ.
ಕೆ.ಆರ್.ಪುರ ನಿವಾಸಿ ಇಮ್ರಾನ್ (26) ಬಂಧಿತ. ಆರೋಪಿಯಿಂದ8.50 ಲಕ್ಷ ರೂ. ಮೌಲ್ಯದ 147 ಗ್ರಾಂ ಚಿನ್ನಾಭರಣ, 1ಕೆ.ಜಿ.517 ಗ್ರಾಂ ಬೆಳ್ಳಿ, 1 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆತನ ವಿರುದ್ಧ ಮಹದೇವಪುರ,
ಅಶೋಕ್ ನಗರ, ಕೆ.ಆರ್. ಪುರ, ಮಾರತ್ತಹಳ್ಳಿ ಸೇರಿ ನಗರದ 6 ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಆರೋಪಿಯು ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಅವರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದು, ಪತ್ನಿಯನ್ನು ಹೆಚ್ಚು ಪ್ರೀತಿಸುತ್ತಿದ್ದ. ಗುಜರಿ ಕೆಲಸ ಮಾಡಿಕೊಂಡಿದ್ದ ಇಮ್ರಾನ್, ತನ್ನ ಸಂಪಾದನೆಯಲ್ಲಿ ಪತ್ನಿಯನ್ನು ಪ್ರವಾಸಕ್ಕೆ ಕರೆದೊಯ್ಯಲು ಸಾಧ್ಯವಿಲ್ಲ ಎಂದು ತಿಳಿಕೊಂಡಿದ್ದ. ಹೀಗಾಗಿ ಗುಜರಿ ವಸ್ತುಗಳನ್ನು ಕೇಳುವ ನೆಪದಲ್ಲಿ ಸಿರಿವಂತರ ಮನೆಗಳನ್ನು ಗುರುತಿಸುತ್ತಿದ್ದ. ಕೆಲ ದಿನಗಳ ಬಳಿಕ ಗುರುತಿಸಿದ್ದ ಮನೆ ಬಳಿ ಹೋಗಿ, ಅವರು ಮನೆಯಲ್ಲಿ ಇದ್ದಾರೆಯೇ? ಇಲ್ಲವೇ? ಎಂಬ ಬಗ್ಗೆ ತಿಳಿದುಕೊಳ್ಳುತ್ತಿದ್ದ. ಅದೇ ದಿನ ರಾತ್ರಿ ಮನೆಯ ಬಾಗಿಲನ್ನು ರಾಡ್‌ನಿಂದ ಮೀಟಿ ಚಿನ್ನಾಭರಣ, ನಗದು ಕದ್ದು ಪರಾರಿಯಾಗುತ್ತಿದ್ದ. ನಂತರ ಫೈನಾನ್ಸ್ ಕಂಪನಿಗಳಲ್ಲಿ ಚಿನ್ನಾಭರಣಗಳನ್ನು ಅಡಮಾನ ವಿಟ್ಟು, ಬಂದ ಹಣದಲ್ಲಿ ಪತ್ನಿಯನ್ನು ಕಾಶ್ಮೀರ ಸೇರಿ ದೇಶದ ಪ್ರವಾಸಿ ತಾಣಗಳಿಗೆ ಪತ್ನಿ ಜತೆಹೋಗಿ, ಮೋಜು ಮಾಡುತ್ತಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ : ವೃದ್ಧೆಗೆ ಮಸಾಜ್ ಮಾಡಿ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕದ್ದು ಪರಾರಿಯಾದ ಮಹಿಳೆಯರು
ಮನೆಯ ಹಿಂಬಾಗಿಲಿಂದ ಎಸ್ಕೇಪ್: ಅಪರಾಧ ಸಂಬಂಧ ಪೊಲೀಸರು ಹುಡುಕಿಕೊಂಡು ಬಂದಾಗ ಮನೆಯ ಹಿಂಬಾಗಿಲಿಂದ ನಾಪತ್ತೆಯಾಗುತ್ತಿದ್ದ. ಹೀಗಾಗಿ ಮನೆಯ ಮುಂಭಾಗಿಲಿಗೆ ಸಣ್ಣದಾದ ಕಿಂಡಿ
ಮಾಡಿಕೊಂಡಿದ್ದಾನೆ. ಪೊಲೀಸರ ಸಮವಸ್ತ್ರ ಹಾಗೂ ಪೊಲೀಸರಂತೆ ಕಂಡು ಬಂದರೆ ಹಿಂಬಾಗಿಲಿಂದ ಪರಾರಿಯಾಗುತ್ತಿದ್ದ ಎಂದು ಪೊಲೀಸರು ಹೇಳಿದರು.