Advertisement

1,200 ರೂ.ಗೆ ಯುವಕನ ಕೊಲೆ ಪ್ರಕರಣ : 12 ಆರೋಪಿಗಳ ಬಂಧನ

02:56 PM Jan 10, 2022 | Team Udayavani |

ಬೆಂಗಳೂರು: ಆ್ಯಪ್‌ವೊಂದರ ಖಾತೆ ಖರೀದಿಸಲು ಪಡೆದುಕೊಂಡ ಹಣ ವಾಪಸ್‌ ಕೊಡದ ವಿಚಾರಕ್ಕೆ ಯವಕನೊಬ್ಬನನ್ನು ಕೊಲೆಗೈದಿದ್ದ 12 ಮಂದಿ ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಹರಿನಗರದ ನಿವಾಸಿ ಕಿರಣ್‌ (19), ಪವನ್‌ (19), ಕಾರ್ತಿಕ್‌ (19), ಮಣಿಕಂಠ (19), ಪವನ್‌ ಕುಮಾರ್‌ (20), ಅಭಿಷೇಕ್‌ (19), ಅನಿಲ್‌ ಕುಮಾರ್‌ (20), ಮುನೇಶ್‌ ಕುಮಾರ್‌ (19), ಶಶಾಂಕ್‌ (18) ಹಾಗೂ ಮೂವರು ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಲಾಗಿದೆ. ಆರೋಪಿಗಳು ಜ.4ರಂದು ಮೆಹಬೂಬ್‌ ಎಂಬಾತನನ್ನು ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.

Advertisement

ಏನಿದು ಪ್ರಕರಣ?: ಆರು ತಿಂಗಳ ಹಿಂದೆ ಮೊಬೈಲ್‌ನಲ್ಲಿ ಫ್ರೀ ಫೈಯರ್‌ ಆ್ಯಪ್‌ ಖರೀದಿಸಲು ಕೋಣನಕುಂಟೆ ನಿವಾಸಿ ಲಲಿತ್‌ಗೆ ಆರೋಪಿ ಮಣಿಕಂಠ 1,500 ರೂ. ಸಾಲ ನೀಡಿದ್ದ. ಈ ಪೈಕಿ 300 ರೂ.ನ್ನು ಲಲಿತ್‌ ಹಿಂತಿರುಗಿಸಿದ್ದು, 1,200  ರೂ. ಕೊಡಲು ಬಾಕಿಯಿತ್ತು. ಹೀಗಾಗಿ, ಜ.4ರಂದು ರಾತ್ರಿ 7 ಗಂಟೆಗೆ ಕೋಣನಕುಂಟೆ ಸರ್ಕಾರಿ ಶಾಲೆ ಬಳಿ ಲಲಿತ್‌ನನ್ನು ಕರೆಸಿಕೊಂಡಿದ್ದ ಮಣಿಕಂಠ ಸಾಲ ಹಿಂತಿರುಗಿಸುವಂತೆ ಒತ್ತಾಯಿಸಿದ್ದ.

ಲಲಿತ್‌ ಈ ಬಗ್ಗೆ ಸ್ನೇಹಿತ ದರ್ಶನ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದ. ದರ್ಶನ್‌ ತನ್ನ ಸಹೋದರ ಮನೋಜ್‌ ಜತೆಗೆ ಶಾಲೆ ಬಳಿಗೆ ಹೋಗಿ ಮಣಿಕಂಠನನ್ನು ಸಾಲದ ಕುರಿತು ಪ್ರಶ್ನಿಸಿದ್ದ. ಆ ವೇಳೆ ಮಣಿಕಂಠನ ಜತೆಯಲ್ಲಿದ್ದ ಆರೋಪಿಗಳು ಲಲಿತ್‌ ಪರ ಮಾತನಾಡಲು ನಿನ್ಯಾರು ಎಂದು ಬೆದರಿಸಿದ್ದರು. ಆಗ ಆಕ್ರೋಶಗೊಂಡ ದರ್ಶನ್‌, ಕಿರಣ್‌ ಮೇಲೆ ಹಲ್ಲೆ ನಡೆಸಿದ್ದ. ಅದರಿಂದ ಕೋಪಗೊಂಡ ಕಿರಣ್‌ ಹಾಗೂ ಸಹಚರರಾದ ಪವನ್‌ ಇಬ್ಬರು ದರ್ಶನ್‌ಗೆ ಹಲ್ಲೆ ನಡೆಸಿ, ಸ್ವಲ್ಪ ಹೊತ್ತಿನಲ್ಲೇ ವಾಪಸ್‌ ಬರುವುದಾಗಿ ಹೇಳಿ ಹೋಗಿದ್ದರು.

ಇದನ್ನೂ ಓದಿ : ಕೆಲಸ ಕೊಡಿಸುವುದಾಗಿ 26 ಯುವತಿಯರಿಗೆ 21.30 ಲಕ್ಷ ರೂ. ಪಂಗನಾಮ ಹಾಕಿದ ಕಿಲಾಡಿ ಅಂದರ್

ಈ ವಿಚಾರವನ್ನು ಲಲಿತ್‌ ಹಾಗೂ ಮಂಜುನಾಥ್‌, ದರ್ಶನ್‌ ಸ್ನೇಹಿತ ಮೆಹೆಬೂಬ್‌ಗ ಕರೆ ಮಾಡಿ ತಿಳಿಸಿ ಸ್ಥಳಕ್ಕೆ ಬರುವಂತೆ ಸೂಚಿಸಿದ್ದ. ಮೆಹೆಬೂಬ್‌ ಸ್ಥಳಕ್ಕೆ ಬಂದು ವಿಚಾರಿಸುತ್ತಿದ್ದಾಗ, ಇತ್ತ ಆರೋಪಿಗಳಾದ ಕಿರಣ್‌, ಮಣಿಕಂಠ, ಪವನ್‌ ಇತರೆ ಆರೋಪಿಗಳೊಂದಿಗೆ ಮಾರಕಾಸ್ತ್ರ ಹಿಡಿದುಕೊಂಡು ತಲೆ, ಬೆನ್ನಿಗೆ ಮಾರಕಾಸ್ತ್ರಗಳಿಂದ ಇರಿದು ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next