ಬೆಂಗಳೂರು: ಮದ್ಯದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳದಲ್ಲಿ ಪಾನಿಪೂರಿ ವ್ಯಾಪಾರಿ ಕೊಲೆಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋನಪ್ಪನ ಅಗಹ್ರಾರ ನಿವಾಸಿ ಸರ್ವೇಶ್ ಸಿಂಗ್ (32) ಕೊಲೆಯಾದವ. ಭಾನುವಾರ ರಾತ್ರಿ ಸುಮಾರು 11.30ಕ್ಕೆ ಬೆಂಗಳೂರು-ಹೊಸೂರು ಮುಖ್ಯರಸ್ತೆಯ ಕೋನಪ್ಪನ ಅಗ್ರಹಾರದ ಸರ್ಕಲ್ ಬಳಿ ಈ ಘಟನೆ ನಡೆದಿದೆ.
ಕೊಲೆ ಸಂಬಂಧ ಆರೋಪಿಗಳಾದ ಜಾರ್ಖಂಡ್ ಮೂಲದ ಸಹದೇವ(45) ಮತ್ತು ರಾಹುಲ್ ಕುಮಾರ್(26) ಎಂಬುವವರನ್ನು ಬಂಧಿ ಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಏನಿದು ಘಟನೆ?: ಉತ್ತರ ಪ್ರದೇಶ ಮೂಲದ ಸರ್ವೇಶ್ ಸಿಂಗ್, 12 ವರ್ಷಗಳಿಂದ ಕೋನಪ್ಪನ ಅಗ್ರಹಾರ ಪುರಸಭೆ ಎದುರು ರಸ್ತೆ ಬದಿ ಪಾನಿಪೂರಿ ವ್ಯಾಪಾರ ಮಾಡುತ್ತಿದ್ದ. ಪತ್ನಿ ಮತ್ತು ಮಕ್ಕಳ ಜತೆ ಕೋನಪ್ಪನ ಅಗ್ರಹಾರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಭಾನುವಾರ ರಾತ್ರಿ ಪಾನಿಪೂರಿ ವ್ಯಾಪಾರ ಮುಗಿಸಿಕೊಂಡು ಹೆದ್ದಾರಿ ಪಕ್ಕದಲ್ಲಿರುವ ಬಾರ್‌ಗೆ ಹೋಗಿ, ಮದ್ಯ ಸೇವಿಸಲು ಮುಂದಾಗಿದ್ದಾನೆ. ಈ ವೇಳೆ ಪಕ್ಕದ ಟೇಬಲ್ ಮೇಲೆ ಕುಳಿತಿದ್ದ ಆರೋಪಿಗಳು ಪರಸ್ಪರ ಅವಾಚ್ಯ ಶಬ್ಧ ಬಳಸಿಕೊಂಡು ಜೋರಾಗಿ ಮಾತನಾಡುತ್ತಿದ್ದರು. ಆಗ ಸರ್ವೇಶ್ ಸಿಂಗ್, ನಿಧಾನವಾಗಿ ಮಾತನಾಡುವಂತೆ ಹೇಳಿದ್ದಾನೆ. ಅಷ್ಟಕ್ಕೆ ಕೋಪಗೊಂಡ ಆರೋಪಿಗಳು, ಸರ್ವೇಶ್ ಸಿಂಗ್ ಜತೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಹಿಂಬಾಲಿಸಿ ಹಲ್ಲೆ ಮಾಡಿ ಹತ್ಯೆ: ನಂತರ ಬಾರ್ ಸಿಬ್ಬಂದಿ ಮೂವರಿಗೂ ಸಮಧಾನ ಮಾಡಿ ಕಳುಹಿಸಿದ್ದಾರೆ. ಬಾರ್‌ನಿಂದ ಹೊರಗೆ ಬಂದ ಸರ್ವೇಶ್ ಸಿಂಗ್ ಸಿಗರೇಟ್ ಸೇದುವಾಗ ಮತ್ತೆ ಆರೋಪಿಗಳು ಆತನ ಬಳಿ ಬಂದು ಕಿರಿಕ್ ಮಾಡಿದ್ದಾರೆ. ಬಳಿಕ ಸರ್ವೇಶ್ ಸಿಂಗ್ ಹೆದ್ದಾರಿ ದಾಟಿಕೊಂಡು ಮನೆ ಕಡೆ ಹೊರಟ್ಟಿದ್ದಾನೆ. ಈ ವೇಳೆ ಆರೋಪಿಗಳ ಆತನನ್ನು ಹಿಂಬಾಲಿಸಿ ಮತ್ತೆ ಜಗಳ ತೆಗೆದು, ಸರ್ವೇಶ್ ಸಿಂಗ್‌ಗೆ ಕಾಲಿನಿಂದ ಒದ್ದು ರಸ್ತೆಗೆ ಕೆಡವಿದ್ದಾರೆ. ಬಳಿಕ ಅಲ್ಲೇ ಬಿದ್ದಿದ್ದ ಪಾರ್ಕಿಂಗ್ ಟೈಲ್ಸ್ ತೆಗೆದು ಸರ್ವೇಶ್ ಸಿಂಗ್‌ನ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪ್ರಕರಣ ದಾಖಲಿಸಿಕೊಂಡು ಕೆಲವೇ ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಆರೋಪಿಗಳು: ಜಾರ್ಖಂಡ್ ಮೂಲದ ಆರೋಪಿಗಳು ಒಂದು ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಗಾರೆ ಕೆಲಸ ಮಾಡಿಕೊಂಡಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ ಪೊಲೀಸರು ತಿಳಿಸಿದರು. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.