ಬೆಂಗಳೂರು: ಮದ್ಯದ ಅಮಲಿನಲ್ಲಿ ಮೂವರು ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ನೇಪಾಳ ಮೂಲದ ಬಾಲಾಜಿ (43) ಕೊಲೆಯಾದವ.
ನಿರ್ಮಾಣ ಹಂತದ ಕೊತ್ತನೂರು ಸಮುದಾಯ ಭವನ ಕಟ್ಟಡದಲ್ಲಿ ಭಾನುವಾರ ಮಧ್ಯರಾತ್ರಿ 12 ಗಂಟೆಗೆ ಘಟನೆ ನಡೆದಿದೆ.
ದಿನಗೂಲಿ ಕೆಲಸಗಾರನಾಗಿರುವ ಬಾಲಾಜಿ, ಹಲವು ವರ್ಷಗಳ ಹಿಂದೆಯೇ ನೇಪಾಳದಿಂದ ಬೆಂಗಳೂರಿಗೆ ಬಂದಿದ್ದು, ಕೊತ್ತನೂರಿನಲ್ಲಿ ವಾಸವಾಗಿದ್ದ. ಈತ ವಿಪರೀತ ಮದ್ಯ ವ್ಯಸನಿಯಾಗಿದ್ದರಿಂದ ಮನೆಯಿಂದ ದೂರವಾಗಿದ್ದು, ಕೊತ್ತನೂರು ಭಾಗದಲ್ಲಿ ಎಲ್ಲೆಂದರಲ್ಲಿ ಮಲಗುತ್ತಿದ್ದ. ಕೊತ್ತನೂರಿನ ನಿರ್ಮಾಣ ಹಂತದ ಸಮುದಾಯ ಭವನದ ಕಟ್ಟಡದಲ್ಲಿ ಭಾನುವಾರ ರಾತ್ರಿ ಬಾಲಾಜಿ ಹಾಗೂ ಇಬ್ಬರು ಸ್ನೇಹಿತರು ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮೂವರ ಮಧ್ಯೆ ಜಗಳ ಶುರುವಾಗಿದೆ. ಈ ವೇಳೆ ಸ್ನೇಹಿತರಿಬ್ಬರು ಬಾಲಾಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಾಜಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾಗೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಸೋಮವಾರ ಮುಂಜಾನೆ ಬಾಲಾಜಿ ಮೃತಪಟ್ಟಿದ್ದಾನೆ.