ಬೆಂಗಳೂರು : ಖ್ಯಾತ ನಟಿ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ನಿರ್ಮಾಣದ ಚಿತ್ರಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆ ಬಳಕೆಗೆ ನೀಡಿದ್ದ ತಡೆಯಾಜ್ಞೆಯನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತೆರವು ಮಾಡಿದೆ.
‘ಬಣ್ಣದ ಗೆಜ್ಜೆ’ ಚಿತ್ರದ ಪ್ರಸಿದ್ಧ ಗೀತೆ “ಸ್ವಾತಿ ಮುತ್ತಿನ ಮಳೆ ಹನಿಯೇ” ಎಂಬ ಗೀತೆಯಿಂದ ಶೀರ್ಷಿಕೆ ಕಸಿಯಲಾಗಿದೆ ಎಂದು ಆರೋಪಿಸಿ ಹಿರಿಯ ಚಲನಚಿತ್ರ ನಿರ್ಮಾಪಕ ಎಸ್‌ವಿ ರಾಜೇಂದ್ರ ಬಾಬು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.ಅದೇ ಹೆಸರಿನ ಚಿತ್ರದ ಚಿತ್ರೀಕರಣವನ್ನು ನಟ ಅಂಬರೀಶ್ ಅವರ ಅಗಲುವಿಕೆಯಿಂದ ಪೂರ್ಣಗೊಳಿಸಲಾಗಲಿಲ್ಲ ಎಂದು ಬಾಬು ಹೇಳಿಕೊಂಡಿದ್ದರು.
ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪದ್ಮಪ್ರಸಾದ್ ಅವರು ಬಾಬು ಪರವಾಗಿ ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆ ಆದೇಶವನ್ನು ಬುಧವಾರ ತೆರವು ಮಾಡಿದ್ದಾರೆ.
ಬಾಬು ಅವರು ಶೀರ್ಷಿಕೆಯನ್ನು ನೋಂದಾಯಿಸಿದ್ದಾರೆ ಅಥವಾ ಹಾಡಿನ ಒಂದು ಸಾಲನ್ನು ಹಕ್ಕುಸ್ವಾಮ್ಯ ವಸ್ತುವೆಂದು ಪರಿಗಣಿಸಬಹುದು ಎಂದು ತೋರಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಆಪಲ್ ಬಾಕ್ಸ್ ಸ್ಟುಡಿಯೋಸ್ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆಯ ಸಂಪೂರ್ಣ ಮಾಲಕತ್ವವನ್ನು ಹೊಂದಿದೆ ಎಂದು ಸಾಕಷ್ಟು ದಾಖಲೆ ತೋರಿಸಿದೆ ಎಂದು ಹೇಳಿದೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ರೊಮ್ಯಾಂಟಿಕ್ ಡ್ರಾಮಾ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ರಾಜ್ ಬಿ ಶೆಟ್ಟಿ ಜತೆ ಸಿರಿ ರವಿಕುಮಾರ್ ನಟಿಸಿದ್ದಾರೆ.