Advertisement

ಬೆಂಗಳೂರು: ಬೈಕ್ ಕಳ್ಳತನ ದಂಧೆಗೆ ಪೊಲೀಸ್ ಕಾನ್‌ಸ್ಟೆಬಲ್ ಕಿಂಗ್ ಪಿನ್!

07:23 PM Dec 24, 2021 | Team Udayavani |

ಬೆಂಗಳೂರು: ಪೊಲೀಸರು ಶುಕ್ರವಾರ ಬೆಂಗಳೂರಿನಲ್ಲಿ ಕಳವಾಗಿದ್ದ 77 ಲಕ್ಷ ಮೌಲ್ಯದ 53 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದು, ದಂಧೆಯ ಹಿಂದೆ ಪೊಲೀಸನೇ ಕಿಂಗ್ ಪಿನ್ ಎಂದು ತಿಳಿದು ಬಂದಿದೆ.

Advertisement

ಆರೋಪಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಕ್ರೈಂ ಪೊಲೀಸ್ ಕಾನ್‌ಸ್ಟೆಬಲ್ ಹೊನ್ನಪ್ಪ ದುರದಪ್ಪ ಮಾಳಗಿ ಬೈಕ್ ಗ್ಯಾಂಗ್ ನ ನೇತೃತ್ವ ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೇಶ ಎಂಬಾತನನ್ನೂ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದು, ಕಾನ್‌ಸ್ಟೆಬಲ್ ಮಾಳಗಿ ಜತೆ ಕೈಜೋಡಿಸಿದ್ದ ಎಂದು ತಿಳಿದು ಬಂದಿದೆ. ಆರೋಪಿ ರಮೇಶ ಪೊಲೀಸ್ ಕಾನ್‌ಸ್ಟೆಬಲ್ ಮಾಳಗಿ ನಿರ್ದೇಶನದ ಮೇರೆಗೆ ಬೈಕ್ ಕಡಿಯುವ ಕಾರ್ಯದಲ್ಲಿ ತೊಡಗಿದ್ದ, ಜೊತೆಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳು ಸೆಕೆಂಡ್ ಹ್ಯಾಂಡ್ ಬೈಕ್‌ಗಳನ್ನು ಮಾರಾಟ ಮಾಡುವ ಪೋರ್ಟಲ್‌ಗಳಿಗೆ ಹೋಗಿ ನೋಂದಣಿ ಸಂಖ್ಯೆಗಳನ್ನು ಸಂಗ್ರಹಿಸಿ ಕಳ್ಳತನ ಮಾಡಿದ ವಾಹನಗಳ ಮೇಲೆ ಆ ನೋಂದಣಿ ಸಂಖ್ಯೆಗಳನ್ನು ಹಾಕಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಬ್ಯಾಂಕ್ ಸಾಲ ಮರುಪಾವತಿ ಮಾಡಬೇಕಾಗಿರುವುದರಿಂದ ವಾಹನಗಳ ದಾಖಲೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಗ್ರಾಹಕರಿಗೆ ಹೇಳುತ್ತಿದ್ದರು.

ಬೈಕ್ ಕಳ್ಳತನ ಮಾಡಿ ಅಪ್ರಾಪ್ತ ಬಾಲಕರು ಪೊಲೀಸರಿಗೆ ಸಿಕ್ಕಿ ಬಿದ್ದಾಗಲೆಲ್ಲ ಆರೋಪಿಗಳು ಪೊಲೀಸರಿಗೆ ಕರೆ ಮಾಡಿ ತಾವು ಸಂಬಂಧಿಕರು ಎಂದು ಹೇಳುತ್ತಿದ್ದರು. ನಂದಿನಿ ಲೇಔಟ್, ಯಶವಂತಪುರ, ಎಚ್‌ಎಂಟಿ ಲೇಔಟ್, ಜಾಲಗಳ್ಳಿ ಕ್ರಾಸ್, ಹೆಬ್ಬಾಳ, ಜ್ಞಾನಭಾರತಿ, ಪೀಣ್ಯ, ರಾಜಗೋಪಾಲನಗರ ಮತ್ತಿತರ ಪ್ರದೇಶಗಳಲ್ಲಿ ಮಾಳಗಿ ಸರಣಿ ಬೈಕ್ ಕಳ್ಳತನ ಮಾಡುತ್ತಿದ್ದ ದಂಧೆಯ ಮಾಸ್ಟರ್ ಮೈಂಡ್ ಆಗಿದ್ದ.

Advertisement

ಪೊಲೀಸರು ಶುಕ್ರವಾರ ಮೂರು ಬೈಕ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ವಾಹನ ಖರೀದಿಯಲ್ಲಿ ಎಚ್ಚರಿಕೆ ವಹಿಸುವಂತೆ ಡಿಸಿಪಿ ಪಾಟೀಲ್ ಜನರಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next