ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಅಭಿಮಾನಿಗಳಿಗೆ ಅರಗಿಸಲು ಕಷ್ಟವಾಗುತ್ತಿದೆ. ನೆಚ್ಚಿನ ನಟನ ನಿಧನದ ಸುದ್ದಿ ಕೇಳಿದ ಸಾವಿರಾರು ಅಭಿಮಾನಿಗಳು ಪುನೀತ್ ನಿವಾಸದತ್ತ ದೌಡಾಯಿಸಿದ್ದಾರೆ. ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.
ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವ ಕಾರಣ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ ಯಾವುದೇ ವದಂತಿಗಳನ್ನು ಪ್ರಚಾರ ಮಾಡದಂತೆ ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಕರಾಳ ದಿನ : ಪುನೀತ್ ಅಗಲಿಕೆಗೆ ಪ್ರಧಾನಿ ಮೋದಿ, ರಾಹುಲ್ ಸೇರಿ ಗಣ್ಯರ ಕಂಬನಿ
ಸಾಮಾಜಿಕ ಜಾಲತಾಣ ಕೂ ನಲ್ಲಿ ಬೆಂಗಳೂರು ನಗರ ಪೊಲೀಸರು ಸಂದೇಶ ನೀಡಿದ್ದು, “ಆತ್ಮೀಯ ಬೆಂಗಳೂರಿಗರೇ, ದಯವಿಟ್ಟು ಯಾವುದೇ ವದಂತಿಗಳನ್ನು ನಂಬಬೇಡಿ ಹಾಗೂ ಯಾವುದೇ ರೀತಿಯ ವದಂತಿಗಳನ್ನು ಪ್ರಚಾರ ಮಾಡಬೇಡಿ. ಬೆಂಗಳೂರು ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬೆಂಗಳೂರು ನಗರ ಪೊಲೀಸರಾದ ನಾವು ನಮ್ಮ ನಗರದಲ್ಲಿ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಭರವಸೆಯನ್ನು ನೀಡುತ್ತೇವೆ.” ಎಂದಿದ್ದಾರೆ.
ಬೆಂಗಳೂರು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇಂದು ಸಂಜೆಯಿಂದ ಕಂಠೀರವ ಸ್ಟೇಡಿಯಂ ನಲ್ಲಿ ಪುನೀತ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕ ವ್ಯವಸ್ಥೆ ಮಾಡಲಾಗಿದೆ.