ಬೆಂಗಳೂರು: ದ್ವಾಪರ ಯುಗದಲ್ಲಿ ಶ್ರೀಕೃಷ್ಣನು ಪ್ರೀತಿ ತಾಯಿ ಯಶೋಧೆಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಾಯಿಯಲ್ಲಿ ಇಡೀ ಜಗತ್ತನ್ನು ತೋರಿಸಿದ್ದ. ಅಂತೆಯೇ ಇಲ್ಲೊಬ್ಬಾಕೆ ತನ್ನೆಲ್ಲ ಅಂಗಾಂಗ ದೌರ್ಬಲ್ಯವನ್ನು ಮೆಟ್ಟಿನಿಂತು ಬಾಯಿಯಲ್ಲಿ ಕುಂಚ ಹಿಡಿದು ವಿಶ್ವದ ಅದ್ಭುತ ಗಳಿಗೆ ಪೇಂಟಿಂಗ್ ಟಚ್ ನೀಡುವ ಮೂಲಕ ಚಿತ್ರಸಂತೆಯಲ್ಲಿದ್ದ ಜನರ ಗಮನ ಸೆಳೆದಿದ್ದಾರೆ….
ಸುನೀತ ತ್ರಿಪ್ಪನಿಕ್ಕರ್ ಮೂಲತಃ ಕೇರಳದವರು. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಉಳ್ಳವರಾಗಿದ್ದರು. ಕೈಗಳಿಂದ ಚಿತ್ರವನ್ನು ಬಿಡಿಸಲು ಪ್ರಾರಂಭಿಸಿದ ಅವರು, ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಸಮಸ್ಯೆಯಿಂದಾಗಿ ತಮ್ಮ ಕೈಗಳು ಬಲವನ್ನು ಕಳೆದುಕೊಂಡವು. ಇಷ್ಟಾದರೂ ಪೇಂಟಿಂಗ್ ಮಾಡುವುದನ್ನು ನಿಲ್ಲಿಸಲಿಲ್ಲ. ತಮ್ಮ ಸಹೋದರನ ಪ್ರೋತ್ಸಾಹ ದಿಂದ ಕೈಗಳ ಬದಲು ಬಾಯಿಯಲ್ಲಿ ಕುಂಚ ಹಿಡಿದು ಚಿತ್ರಗಳನ್ನು ಬಿಡಿಸಲು ಮುಂದಾದರು.
ಔಟ್ ಸ್ಟಾಂಡಿಂಗ್ ಹುಮೇನ್: ಇವರು, ವಿಶ್ವ ಮಟ್ಟದ ಬಾಯಿ ಮತ್ತು ಆಹಾರ ವರ್ಣ ಕಲಾವಿದರ ಸಂಸ್ಥೆಯ ವಿದ್ಯಾರ್ಥಿ ಸದಸ್ಯೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಚಿತ್ರಕಲಾಕೃತಿ ಗಳಿಗೆ 2017ರಲ್ಲಿ ನಡೆದ ವಿಶ್ವ ದಿವ್ಯಾಂಗರ ದಿನಾಚರಣೆಯಲ್ಲಿ “ಔಟ್ ಸ್ಟಾಂಡಿಂಗ್ ಕ್ರಿಯೇಟಿಂಗ್ ಹುಮೆನ್’ ಎಂಬ ಪ್ರಶಸ್ತಿಯೂ ಲಭಿಸಿದೆ. ಅಷ್ಟೇ ಅಲ್ಲದೇ, ವರ್ಲ್ಡ್ ರೆಕಾರ್ಡ್ ನಲ್ಲಿಯೂ ಇವರು ರಚಿಸಿರುವ ಚಿತ್ರಗಳು ದಾಖಲಾಗಿವೆ.
ಅಕ್ರಲಿಕ್, ಮಾಡನ್ ಆರ್ಟ್, ಚಾರ್ಕೋಲ್, ಅಬ್‌ಸ್ಟ್ರಾಕ್ಟ್, ಆಯಿಲ್ ಪೇಂಟಿಂಗ್, ಜಲ ವರ್ಣ ಸೇರಿ ವಿವಿಧ ಮಾದರಿಯಲ್ಲಿ ಅದ್ಭುತ ವಾದ ಚಿತ್ರಗಳನ್ನು ಬಿಡಿಸುತ್ತಾರೆ. ಚಿಕ್ಕ ಅಳತೆಯ ಕಲಾಚಿತ್ರಗಳನ್ನು ಒಂದು ದಿನದಲ್ಲಿ, ಎರಡರಿಂದ ಮೂರಡಿ ಫ್ರೇಮಿನ ಚಿತ್ರಗಳನ್ನು ಎರಡು ಅಥವಾ ಮೂರು ದಿನಗಳಲ್ಲಿ ಹಾಗೂ ಐದಾರು ಅಡಿ ಉದ್ದದ ಫ್ರೇಮಿನ ಚಿತ್ರಗಳನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸುತ್ತಾರೆ. ದುಬೈ, ಸಿಂಗಾಪುರ್ ಸೇರಿದಂತೆ ಬೆಂಗಳೂರಿ ನಲ್ಲಿ ನಡೆಯುವ ಚಿತ್ರಸಂತೆಯಲ್ಲೂ ಐದು ವರ್ಷಗಳಿಂದ ಭಾಗವಹಿಸುತ್ತಿದ್ದೇನೆ. ಈ ಬಾರಿ ಒಂದೂವರೆ ಸಾವಿರದಿಂದ 10ಸಾವಿರದವರೆಗಿನ ಚಿತ್ರಕಲಾಕೃತಿ ಪ್ರದರ್ಶನ, ಮಾರಾಟಕ್ಕೆ ಇಡಲಾ ಗಿದೆ ಎಂದು ಉದಯವಾಣಿಗೆ ತಿಳಿಸಿದ್ದಾರೆ.
ಬಾಲ್ಯದಿಂದ ಪೇಂಟಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ನನಗೆ, ಕೆಲವೇ ವರ್ಷಗಳಲ್ಲಿ ಅಂಗಾಂಗ ದೌರ್ಬಲ್ಯಕ್ಕೆ ಒಳಗಾದೆ. ಆಗ ನನ್ನ ಸಹೋದರ ಮತ್ತು ಕುಟುಂಬದವರು ನನಗೆ ಪ್ರೋತ್ಸಾಹ ನೀಡಿದ ಕಾರಣ, ಇಂದು ನಾನಾ ದಾಖಲೆಗಳನ್ನು ಮಾಡಿದ ಹೆಗ್ಗಳಿಕೆ ನನ್ನದಾಗಿದೆ.
–ಸುನೀತ ತ್ರಿಪ್ಪನಿಕ್ಕರ್, ಕೇರಳದ ಕಲಾವಿದೆ
– ಭಾರತಿ ಸಜ್ಜನ್