Advertisement

Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ

12:23 PM Nov 16, 2024 | Team Udayavani |

ಬೆಂಗಳೂರು: ಆನ್‌ಲೈನ್‌ ಹೂಡಿಕೆ ಹೆಸರಿ ನಲ್ಲಿ ವಂಚಿಸಲು ವಿದ್ಯಾರ್ಥಿಗಳಿಂದ ಬ್ಯಾಂಕ್‌ ಖಾತೆಗಳನ್ನು ತೆರೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ರಾಜಸ್ಥಾನ ಮೂಲದ ಅಭಯ್‌ ದಾನ್‌ ಚರಣ್‌ (19), ಅರವಿಂದ್‌ ಕುಮಾರ್‌ (19), ಪವನ್‌ ಬಿಷ್ಣೋಯಿ (18) ಹಾಗೂ ಸವಾಯಿ ಸಿಂಗ್‌ (21) ಬಂಧಿತರು. 19 ಮೊಬೈಲ್‌, 2 ಲ್ಯಾಪ್‌ಟಾಪ್‌, 20 ಸಿಮ್‌ ಕಾರ್ಡ್‌ಗಳು, ವಿದ್ಯಾರ್ಥಿಗಳಿಂದ ತೆರೆಸಿದ್ದ 34 ಬ್ಯಾಂಕ್‌ ಪಾಸ್‌ಬುಕ್‌ಗಳು, 106 ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳು, 39 ಬ್ಯಾಂಕ್‌ ಚೆಕ್‌ಬುಕ್‌ಗಳು ಹಾಗೂ 75 ಸಾವಿರ ರೂ. ಜಪ್ತಿ ಮಾಡಲಾಗಿದೆ.

ಕೆಲವೊಂದು ಮೂಲಗಳಿಂದ ಜನರ ಮೊಬೈಲ್‌ ನಂಬರ್‌ ಪಡೆಯುತ್ತಿದ್ದ ಆರೋಪಿಗಳು ನೌಕರಿ, ಹೂಡಿಕೆ ನೆಪಲ್ಲಿ ವಂಚಿಸುತ್ತಿದ್ದರು. ಈ ರೀತಿ ವಂಚಿಸಲು ಅಗತ್ಯವಿರುವ ಬ್ಯಾಂಕ್‌ ಖಾತೆಗಳಿಗಾಗಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ಬಳಿ ಹೋಗಿ ವಿದ್ಯಾರ್ಥಿಗಳನ್ನು ಸಂಪರ್ಕಿ ಸುತ್ತಿದ್ದರು. ಕರೆನ್ಸಿ ಎಕ್ಸ್‌ಚೇಂಜ್‌ ಮಾಡಲು ಬ್ಯಾಂಕ್‌ ಖಾತೆಗಳ ಅವಶ್ಯಕತೆಯಿದ್ದು, ಬ್ಯಾಂಕ್‌ ಖಾತೆ ಮಾಡಿಸಿಕೊಟ್ಟಲ್ಲಿ ನಿಮಗೆ 1 ರಿಂದ 2 ಸಾವಿರ ರೂ. ಲಾಭಾಂಶ ಕೊಡುವುದಾಗಿ ಅಮಿಷವೊಡ್ಡಿ ಬ್ಯಾಂಕ್‌ ಖಾತೆ ತೆರೆಸುತ್ತಿದ್ದರು. ನಂತರ ವಿದ್ಯಾರ್ಥಿಗಳಿಂದ ಬ್ಯಾಂಕ್‌ ಖಾತೆಯ ಪಾಸ್‌ಬುಕ್‌, ಚೆಕ್‌ಬುಕ್‌, ಎ.ಟಿ.ಎಂ ಕಾರ್ಡ್‌ ಹಾಗೂ ಖಾತೆ ತೆರೆಯಲು ಬಳಸಿದ ಮೊಬೈಲ್‌ ಸಿಮ್‌ ಕಾರ್ಡ್‌ಗಳನ್ನು ಆರೋಪಿಗಳು ಪಡೆದುಕೊಂಡು ವಂಚನೆಗೆ ಬಳಸುತ್ತಿದ್ದರು.

ವಿದ್ಯಾರ್ಥಿಗಳಿಂದ ತೆರೆಸಿದ ಬ್ಯಾಂಕ್‌ ಖಾತೆ ಬಳಸಿ, ಸೈಬರ್‌ ಕ್ರೈಮ್‌ನಿಂದ ಬಂದ ಹಣವನ್ನು ವಿತ್‌ ಡ್ರಾ ಮಾಡಿ ಬೇರೆ ಖಾತೆಗಳಿಗೆ ವರ್ಗಾಯಿಸುತ್ತಿದ್ದರು.

ಆನ್‌ಲೈನ್‌ ವಂಚನೆಗೆ ಬಳಕೆಯಾದ ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ಆರೋಪಿಗಳ ಕೃತ್ಯ ಬಯಲು

Advertisement

ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದ ಆರೋಪಿಗಳು ಪಾರ್ಟ್‌ ಟೈಂ ಕೆಲಸ ಕೊಡಿಸುವುದಾಗಿ ನಂಬಿಸಿ 12.43 ಲಕ್ಷ ರೂ. ವಂಚಿಸಿದ್ದರು. ವಂಚನೆಗೊಳಗಾದ ವ್ಯಕ್ತಿಯ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು, ವಂಚನೆಗೆ ಬಳಕೆಯಾದ ಬ್ಯಾಂಕ್‌ ಖಾತೆಯ ಜಾಡು ಹಿಡಿದು ಖಾತೆದಾರನನ್ನು ಕರೆತಂದು ವಿಚಾರಣೆಗೊಳಪಡಿಸಿದಾಗ ಆತ ವಿದ್ಯಾರ್ಥಿಯಾಗಿರುವುದು ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಆತನಿಂದ ಬಂಧಿತ ಆರೋಪಿಗಳು ಬ್ಯಾಂಕ್‌ ಖಾತೆ ತೆರೆಸಿ ವಂಚನೆಗೆ ಬಳಸಿರುವುದು ಕಂಡು ಬಂದಿತ್ತು. ಬಳಿಕ ರಾಜಸ್ಥಾನದ ಉದಯ್‌ ಪುರದಲ್ಲಿದ್ದ ಇಬ್ಬರು ಹಾಗೂ ಬೆಂಗಳೂರಿನ ಬೊಮ್ಮನಹಳ್ಳಿಯ ಪಿಜಿಯಲ್ಲಿ ತಂಗಿದ್ದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next