ಬೆಂಗಳೂರು: ವಾಯುವಿಹಾರ ಮಾಡುತ್ತಿದ್ದ ಮಹಿಳೆಯನ್ನು ತಬ್ಬಿ ಚುಂಬಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕ್ಯಾಬ್ ಚಾಲಕನೊಬ್ಬನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಕೊತ್ತನೂರು ದಿಣ್ಣೆ ನಿವಾಸಿ ಸುರೇಶ್(25) ಬಂಧಿತ. ಆ.2ರಂದು ಮುಂಜಾನೆ ಸುಮಾರು 5.15ಕ್ಕೆ ಕೃಷ್ಣಾನಂದ ನಗರದಲ್ಲಿ ಈ ಘಟನೆ ನಡೆದಿದೆ.
35 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕನಕಪುರ ತಾಲೂಕು ಸಂತೆಕೋಡಿಹಳ್ಳಿ ಗ್ರಾಮದ ಆರೋಪಿ ಸುರೇಶ್ ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದು, ಕೋಣನಕುಂಟೆ ಭಾಗದ ಖಾಸಗಿ ಕಂಪನಿಯಲ್ಲಿನ ಉದ್ಯೋಗಿಗಳನ್ನು ಮನೆಯಿಂದ ಪಿಕಪ್ ಮಾಡಿ ಕಂಪನಿಗೆ ಬಿಟ್ಟು, ಸಂಜೆ ಕಂಪನಿಯಿಂದ ಮನೆಗೆ ಬಿಡುವ ಕೆಲಸ ಮಾಡುತ್ತಾನೆ. ಆ.2ರಂದು ಮುಂಜಾನೆ ಮಹಿಳೆಯೊಬ್ಬರು ಕೃಷ್ಣಾನಂದ ನಗರದಲ್ಲಿ ವಾಯು ವಿಹಾರ ಮಾಡುತ್ತಿದ್ದರು. ಈ ವೇಳೆ ಆರೋಪಿ ಸುರೇಶ್, ಹಿಂದಿನಿಂದ ಓಡಿ ಬಂದು ಆಕೆಯನ್ನು ತಬ್ಬಿಕೊಂಡು ಚುಂಬಿಸಲು ಮುಂದಾಗಿದ್ದ. ಈ ವೇಳೆ ಮಹಿಳೆ ತೀವ್ರ ಪ್ರತಿರೋಧವೊಡ್ಡಿ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದರು. ಆದರೂ ಬೆನ್ನಟ್ಟಿದ ಆರೋಪಿ ಮತ್ತೆ ಆ ಮಹಿಳೆಯನ್ನು ಹಿಡಿದುಕೊಂಡು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಬಳಿಕ ಮಹಿಳೆ ಆತನದಿಂದ ಬಿಡಿಸಿಕೊಂಡು ಮನೆಗೆ ಓಡಿ ಹೋಗಿದ್ದರು. ಈ ದೃಶ್ಯ ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಬಂಧನ: ಘಟನೆಯಿಂದ ಆಘಾತಕ್ಕೊಳಗಾಗಿದ್ದ ಮಹಿಳೆ ಆರಂಭ ದಲ್ಲಿ ದೂರು ನೀಡರಲಿಲ್ಲ. ಆದರೆ, ಆ.4ರಂದು ಸಂಜೆ ಕೋಣನಕುಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯ ವಿಚಾರಣೆ ಮುಂದುವರಿ ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ತವ್ಯ ಲೋಪ: ಎಎಸ್ಸೈ ಸೇರಿ ಮೂವರ ಅಮಾನತು: ಕ್ಯಾಬ್ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿ ಸಿದ್ದರು. ಆದರೆ, ಘಟನೆ ಗಂಭೀರವಾಗಿ ಪರಿಗಣಿಸದೆ ಕರ್ತವ್ಯ ಲೋಪ ಎಸಗಿದ ಆರೋಪದಡಿ ಮೂವರು ಸಿಬ್ಬಂದಿಯನ್ನು ಅಮಾನತು ಗೊಳಿಸಿ ಡಿಸಿಪಿ ಲೋಕೇಶ್ ಆದೇಶಿಸಿದ್ದಾರೆ.