Advertisement

Bengaluru: ಕುಡಿತ, ಮಾದಕ ವಸ್ತು ಸೇವನೆಗಾಗಿ ಕಳ್ಳತನಕ್ಕಿಳಿದಿದ್ದ ಆರೋಪಿ ಬಂಧನ

02:40 PM Aug 24, 2024 | Team Udayavani |

ಬೆಂಗಳೂರು: ಮನೆಗಳ್ಳ ಹಾಗೂ ಕದ್ದ ವಸ್ತುಗಳನ್ನು ಆತನಿಂದ ಸ್ವೀಕರಿಸುತ್ತಿದ್ದ ಇಬ್ಬರು ಸೇರಿ ಮೂವರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಆಡುಗೋಡಿಯ ರಾಜೇಂದ್ರ ನಗರದ ಅಪ್ಪು ಆಲಿಯಾಸ್‌ ಕೊಳಾಯಿ (32) ಹಾಗೂ ಆತನಿಂದ ಕದ್ದ ವಸ್ತು ಖರೀದಿಸುತ್ತಿದ್ದ ತಮಿಳುನಾಡಿನ ಪೆರಿಸ್ವಾಮಿ ಹಾಗೂ ತಾಂಬ್ರೆ ಸೆಲ್ವನ್‌ ಬಂಧಿತರು. ಆರೋಪಿಗಳಿಂದ ಸುಮಾರು 26 ಲಕ್ಷ ರೂ. ಮೌಲ್ಯದ 674 ಗ್ರಾಂ ಚಿನ್ನಾಭರಣ, 240 ಗ್ರಾಂ ಬೆಳ್ಳಿ ಹಾಗೂ 50 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

ಅಪ್ಪು ಮನೆಗಳ್ಳತನ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದ. ಸುಮಾರು 10 ವರ್ಷಗಳಿಂದ ಮನೆಯ ಬೀಗ ಮುರಿದು ಕನ್ನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಡ್ರಗ್ಸ್ ದಾಸನಾಗಿದ್ದ ಆರೋಪಿಯು ಅದನ್ನು ಖರೀದಿಸಲು ಬೇಕಾದ ದುಡ್ಡಿಗಾಗಿ ಕಳ್ಳತನಕ್ಕೆ ಇಳಿದಿದ್ದ. ನಗರದ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ 9 ಕನ್ನಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಅಪ್ಪು, ಕಳ್ಳತನ ಪ್ರಕರಣವೊಂದರ ವಾರೆಂಟ್‌ ಮೇರೆಗೆ ಕಳೆದ 7 ತಿಂಗಳಿಂದ ಜೈಲು ಸೇರಿದ್ದ. ಈ ಪ್ರಕರಣದಲ್ಲಿ ಜಾಮೀನು ಪಡೆದು 13 ದಿನಗಳ ಹಿಂದೆ ಹೊರ ಬಂದಿದ್ದ. ಕದ್ದ ಚಿನ್ನಾಭರಣ, ಇತರ ಬೆಲೆ ಬಾಳುವ ವಸ್ತುಗಳನ್ನು ಇತರ ಆರೋಪಿಗಳಿಗೆ ನೀಡುತ್ತಿದ್ದ. ಇನ್ನು ಆರೋಪಿ ಅಪ್ಪು ಸ್ನೇಹಿತ ತಾಂಬ್ರೆ ಸ್ವೆಲನ್‌ ವಿರುದ್ದ ಸರ್ಜಾಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ‌

ವಿದೇಶಿ ಕರೆನ್ಸಿ ಕದ್ದಿದ್ದ ಆರೋಪಿ: ಆ.16ರಂದು ಬೊಮ್ಮನಹಳ್ಳಿಯ ಕೋಡಿಚಿಕ್ಕನಹಳ್ಳಿ ಮನೆಯೊಂದರ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, 50 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಕಳ್ಳತನ ಮಾಡಿದ್ದ. ಕದ್ದ ಚಿನ್ನಾಭರಣವನ್ನು ಧರ್ಮಪುರಿಯಲ್ಲಿರುವ ಅಪ್ಪು ಸಂಬಂಧಿಕ ಪೆರಿಸ್ವಾಮಿ ಅವರಿಗೆ ನೀಡಿದ್ದ. ಸ್ನೇಹಿತ ತಾಂಬ್ರೆ ಸ್ವೆಲನ್‌ ಜೊತೆಗೂಡಿ ಚಿನ್ನಾಭರಣ ಗಿರವಿಡಲು ಸಿದ್ಧತೆ ನಡೆಸಿದ್ದ. ಇತ್ತ ಮನೆ ಮಾಲಿಕರು ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಬೊಮ್ಮನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಪ್ಪುನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಈತ ನೀಡಿದ ಮಾಹಿತಿ ಮೇರೆಗೆ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next