ಉಡುಪಿ: ಬನ್ನಂಜೆ ರಾಮಾ ಚಾರ್ಯರು ಬೆಂಗಳೂರಿನಲ್ಲಿದ್ದಿದ್ದರೆ ದೊಡ್ಡ ಕಥೆಗಾರ, ಕಾದಂಬರಿಕಾರ ರಾಗುತ್ತಿದ್ದರು ಎಂದು ಅವರ ಸೋದರ, ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯ ಹೇಳಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ “ಉದಯವಾಣಿ’ಯ ಆರಂಭದಲ್ಲಿ ಸಂಪಾದಕೀಯ ವಿಭಾಗದ ಮುಖ್ಯಸ್ಥರಾಗಿದ್ದ ರಾಮಾ ಚಾರ್ಯರ ಜನ್ಮಶತಾಬ್ದ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಸಂಸ್ಮರಣಾ ಭಾಷಣ ಮಾಡಿದ ಅವರು, ಘಟ್ಟದ ಮೇಲಿನವರಿಗೆ ಇದ್ದ ಅವಕಾಶ ಘಟ್ಟದ ಕೆಳಗಿನವರಿಗೆ ಸಿಗುತ್ತಿರಲಿಲ್ಲ. ಹೀಗಾಗಿ ಅವರು ಉತ್ತಮ ಕಥೆಗಳನ್ನು ಬರೆಯುತ್ತಿದ್ದರೂ ಕಥೆಗಾರರಾಗಿ ಹೆಸರು ಪಡೆಯಲಿಲ್ಲ, ಕಾದಂಬರಿ ಬರೆದರೂ
ಅದು ಜನರಿಗೆ ತಲುಪಲಿಲ್ಲ ಎಂದರು.
ಅವರು ಸ್ಪಷ್ಟಭಾಷಿ. “ಉದಯ ವಾಣಿ’ಯಲ್ಲಿ ಬಂದಂತಹ ಶಬ್ದಗಳನ್ನು ಜನರು ರೆಫರೆನ್ಸ್ ಆಗಿ ಬಳಸಲು ನಾನು ಮತ್ತು ಅವರು ಒಟ್ಟಿ ಕುಳಿತು ಕೆಲಸ ಮಾಡಿದ್ದು ಕಾರಣ. ಅವರ ಸ್ಪಷ್ಟ ಭಾಷೆಯ ಭಾಷಣಕ್ಕಾಗಿ ಜನರು ಅವರನ್ನು ಕರೆಯುತ್ತಿದ್ದರೂ ಕಡಿಮೆ ವಯಸ್ಸಿನ ನನ್ನನ್ನು ಕಳುಹಿಸಿ ನನ್ನನ್ನು ಭಾಷಣಕಾರನಾಗಿ ಬೆಳೆಸಿದರು. ಅವರು ನಡೆಸುತ್ತಿದ್ದ “ಸುದರ್ಶನ’ ಪತ್ರಿಕೆಗೆ ಕಥೆ, ಕವನ, ಹರಟೆಗಳನ್ನು ಒತ್ತಾಯಪಡಿಸಿ ಬರೆಸಿ ಲೇಖಕನಾಗಿ ಬೆಳೆಸಿದರು ಎಂದು ಗೋವಿಂದಾಚಾರ್ಯ ಹೇಳಿದರು.
ಸ್ಮರಣಸಂಚಿಕೆ ಬಿಡುಗಡೆಗೊಳಿಸಿದ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ವಿದೇಶೀ ಯಾತ್ರೆ ಸಂದರ್ಭ ಬೆಂಬಲ ಕೊಟ್ಟದ್ದನ್ನು ಸ್ಮರಿಸಿಕೊಂಡರು. ಅವರು ವಿಶಿಷ್ಟ ಕೊಡುಗೆಗಳನ್ನು ಸಲ್ಲಿಸಿದ್ದರೂ ಅದು ಬೆಳಕಿಗೆ ಬರಲಿಲ್ಲ ಎಂದರು.
ರಾಮಾಚಾರ್ಯರು ಸ್ವತಂತ್ರ ಧೋರಣೆ ಮತ್ತು ಸಹೃದಯತೆ ಹೊಂದಿದ್ದರು. ತಾವು ಆ ಕಾಲದ ಸಮಾಜವಾದ, ಬೋಸ್, ಗಾಂಧೀ ವಿಚಾರಧಾರೆಗಳಿಂದ ಪ್ರಭಾವಿತರಾಗಿ ದ್ದರೆ ಅವರು ಕಾಂಗ್ರೆಸ್‌ವಾದಿಗಳಾಗಿ ದ್ದರು. ಪುತ್ತಿಗೆ ಶ್ರೀಗಳ ವಿದೇಶೀ ಯಾತ್ರೆಗೆ ತಾವು ವಿರೋಧ ವ್ಯಕ್ತಪಡಿ ಸಿದಾಗ “ದಲಿತ ಕೇರಿಗೆ ಹೋದ ಸ್ವಾಮಿಗಳು ಕಾಣುತ್ತಿಲ್ಲ’ ಎಂದು ತಮಗೆ ಪತ್ರ ಬರೆದಿದ್ದರು. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಆತ್ಮೀಯತೆ ಇತ್ತು ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಜನ್ಮಶತಾಬ್ದ ಸಮಿತಿ ಗೌರವಾಧ್ಯಕ್ಷ ಎ.ಎಸ್.ಎನ್. ಹೆಬ್ಟಾರ್ ತಮ್ಮ ಒಡನಾಟಗಳನ್ನು ಸ್ಮರಿಸಿಕೊಂಡರು. ಅಧ್ಯಕ್ಷ ರತ್ನಕುಮಾರ್ ಸ್ವಾಗತಿಸಿ ಪ್ರ. ಕಾರ್ಯದರ್ಶಿ ಯು.ಆರ್. ಸಭಾಪತಿ ವಂದಿಸಿದರು. ಸರ್ವಜ್ಞ ಬನ್ನಂಜೆ ಉಪಸ್ಥಿತರಿದ್ದರು. “ಮಾಧ್ಯಮ – ನಿನ್ನೆ- ಇಂದು’ ಕುರಿತು ಪತ್ರಕರ್ತರಾದ ಶರತ್ ಕಲ್ಕೋಡ್ ಅಧ್ಯಕ್ಷತೆಯಲ್ಲಿ ಪ್ರೊ| ಎಂ. ರಾಮಚಂದ್ರ, ಈಶ್ವರ ದೈತೋಟ ವಿಷಯ ಮಂಡಿಸಿದರು. ಎ. ಈಶ್ವರಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕೃತಿ ಸಮೀಕ್ಷೆಯಲ್ಲಿ ಪ್ರೊ| ಮುರಲೀಧರ ಉಪಾಧ್ಯ ಹಿರಿಯಡಕ, ಬೈಕಾಡಿ ಮಹಾಬಲೇಶ್ವರ ರಾವ್ ವಿಷಯ ಮಂಡಿಸಿದರು.