ಕೋಲ್ಕತಾ:ಪ್ರಾಥಮಿಕ ಶಾಲೆಯ ಶಿಕ್ಷಕಿಯ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ನಂತರ ರಸ್ತೆಯ ಮೇಲೆ ಎಳೆದೊಯ್ದು ಹಲ್ಲೆ ನಡೆಸಿರುವ ಘಟನೆ ಪಶ್ಚಿಮಬಂಗಾಳದ ದಕ್ಷಿಣ ದಿನಾಜ್ ಪುರ್ ನ ಗಂಗ್ರಾಮ್ ಪುರ್ ಎಂಬಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಸ್ಥಳೀಯ ಪಂಚಾಯತ್ ನ ತೃಣಮೂಲ ಕಾಂಗ್ರೆಸ್ ಮುಖಂಡ ಅಮಲ್ ಸರ್ಕಾರ ಸೇರಿದಂತೆ ಹಲವು ಮಂದಿ ಗುಂಪು ಶಿಕ್ಷಕಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದಾಗಿ ವರದಿ ವಿವರಿಸಿದೆ.
ಶಿಕ್ಷಕಿಗೆ ಸೇರಿದ್ದ ಭೂಮಿಯನ್ನು ಬಲವಂತವಾಗಿ ಅಕ್ರಮಣ ಮಾಡಿ ರಸ್ತೆ ನಿರ್ಮಿಸಲು ಮುಂದಾದ ಪಂಚಾಯತ್ ಮುಖಂಡರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಇದರಿಂದ ಆಕ್ರೋಶಗೊಂಡ ಪಂಚಾಯತ್ ಮುಖಂಡ ಹಾಗೂ ಆತನ ಸಂಗಡಿಗರು ಶಿಕ್ಷಕಿಯ ಕೈಕಾಲು ಕಟ್ಟಿ ರಸ್ತೆಯ ಮೇಲೆ ಎಳೆದೊಯ್ದು ಹಲ್ಲೆ ನಡೆಸಿರುವ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ವರದಿ ತಿಳಿಸಿದೆ.
ಭಾನುವಾರ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪಂಚಾಯತ್ ಮುಖಂಡ ಅಮಲ್ ಸರ್ಕಾರ್ ನನ್ನು ತೃಣಮೂಲ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅರ್ಪಿತಾ ಘೋಷ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.
ಈ ಸಂದರ್ಭದಲ್ಲಿ ಶಿಕ್ಷಕಿಯ ಸಹೋದರಿಯ ಮೇಲೂ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಆರಂಭದಲ್ಲಿಯೇ ಮನೆ ಮುಂಭಾಗದಲ್ಲಿ ರಸ್ತೆ ನಿರ್ಮಾಣಕ್ಕಾಗಿ 12 ಅಡಿ ಅಗಲ ಜಾಗ ನೀಡುವುದಾಗಿ ಶಿಕ್ಷಕಿ ತಿಳಿಸಿದ್ದರು. ಆದರೆ ಪಂಚಾಯತ್ ಮುಖಂಡ ಮತ್ತು ಸದಸ್ಯರು ರಸ್ತೆಗೆ 24 ಅಡಿ ಜಾಗ ನೀಡಬೇಕೆಂದು ನಿರ್ಣಯ ಕೈಗೊಂಡಿದ್ದರು. ಇದರಿಂದ ತಮ್ಮ ಬಹುತೇಕ ಜಾಗ ರಸ್ತೆ ಹೋಗಲಿದ್ದು, ನಮಗೆ ನಷ್ಟವಾಗುತ್ತದೆ ಎಂದು ಶಿಕ್ಷಕಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿ ತಿಳಿಸಿದೆ.
ಘಟನೆ ಬಗ್ಗೆ ಶಿಕ್ಷಕಿ ಐದು ಮಂದಿ ವಿರುದ್ಧ ದೂರು ದಾಖಲಿಸಿದ್ದು, ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.