Advertisement

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

08:20 AM Nov 14, 2024 | Team Udayavani |

ಲಕ್ನೋ: ಇಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಉತ್ತರ ಪ್ರದೇಶ ನಡುವಿನ ರಣಜಿ ಟ್ರೋಫಿಯ 5ನೇ ಹಂತದ ಎಲೈಟ್‌ ಗ್ರೂಪ್‌ “ಸಿ’ ಬಣದ ಪಂದ್ಯದಲ್ಲಿ ಕರ್ನಾಟಕ ತಂಡ 38 ರನ್‌ ಮುನ್ನಡೆಯಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ಉತ್ತರ ಪ್ರದೇಶ ತಂಡ ಕೇವಲ 89 ರನ್ನಿಗೆ ಆಲೌಟ್‌ ಆಗಿದ್ದು, ಕರ್ನಾಟಕ ದಿನದಾಟದ ಅಂತ್ಯಕ್ಕೆ 127 ರನ್ನಿಗೆ 5 ವಿಕೆಟ್‌ ಕಳೆದುಕೊಂಡಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಉತ್ತರ ಪ್ರದೇಶ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿತು. ಋತುರಾಜ್‌ ಸಿಂಗ್‌ 12, ಸಮೀರ್‌ ರಿಜ್ವಿ 25, ಕೃತಾಗ್ಯ ಸಿಂಗ್‌ ಮತ್ತು ಸೌರಭ್‌ ಕುಮಾರ್‌ ತಲಾ 13 ರನ್‌ ಗಳಿಸಿದ್ದು ಬಿಟ್ಟರೆ ಉಳಿದೆಲ್ಲರೂ ಒಂಟಿ ರನ್ನಿಗೆ ವಿಕೆಟ್‌ ಒಪ್ಪಿಸಿದರು. ಪರಿಣಾಮವಾಗಿ ಉತ್ತರ ಪ್ರದೇಶ 40.3 ಓವರ್‌ಗಳಲ್ಲಿ 89 ರನ್ನಿಗೆ ಆಲೌಟ್‌ ಆಯಿತು. ಕರ್ನಾಟಕದ ವಿ.ಕೌಶಿಕ್‌ 20 ರನ್ನಿಗೆ 5 ವಿಕೆಟ್‌ ಕಿತ್ತು ಉತ್ತರ ಪ್ರದೇಶದ ಕುಸಿತಕ್ಕೆ ಕಾರಣರಾದರು. ವಿದ್ಯಾಧರ್‌ ಪಾಟೀಲ್‌ 22ಕ್ಕೆ 3 ವಿಕೆಟ್‌ ಉರುಳಿಸಿದರು.

ಇನ್ನಿಂಗ್ಸ್‌ ಆರಂಭಿಸಿರುವ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 31 ಓವರ್‌ಗಳಲ್ಲಿ 127 ರನ್‌ ಬಾರಿಸಿದೆ. ನಾಯಕ ಮಾಯಾಂಕ್‌ ಅಗರ್ವಾಲ್‌ 30 ರನ್ನಿಗೆ ವಿಕೆಟ್‌ ನೀಡಿದ್ದರೆ, ಕೃಷ್ಣನ್‌ ಶ್ರೀಜಿತ್‌ 68, ಶ್ರೇಯಸ್‌ ಗೋಪಾಲ್‌ 14 ರನ್‌ ಬಾರಿಸಿ ಕ್ರೀಸ್‌ನಲ್ಲಿ ಉಳಿದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಉತ್ತರ ಪ್ರದೇಶ 89 (ಸಮೀರ್‌ 25, ಸೌರಭ್‌ 13, ಕೌಶಿಕ್‌ 20ಕ್ಕೆ 5), ಕರ್ನಾಟಕ 5 ವಿಕೆಟಿಗೆ 127 (ಮಾಯಾಂಕ್‌ 30, ಕೃಷ್ಣನ್‌ 68, ಆಕಿಬ್‌ 31ಕ್ಕೆ 2).

5,406: ಕೇರಳ ಪರ ಸಚಿನ್‌ ಗರಿಷ್ಠ ರನ್‌ ದಾಖಲೆ
ಕೇರಳ ತಂಡದ ನಾಯಕ ಸಚಿನ್‌ ಬೇಬಿ, ಕೇರಳ ಪರ ರಣಜಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್‌ ಆಗಿ ದಾಖಲೆ ನಿರ್ಮಿಸಿದ್ದಾರೆ. ಗ್ರೂಪ್‌ “ಸಿ’ ಪಂದ್ಯದಲ್ಲಿ ಹರಿಯಾಣ ವಿರುದ್ಧ 24 ರನ್‌ ಬಾರಿಸಿ, ಒಟ್ಟಾರೆ 5,406 ರನ್ನುಗಳೊಂದಿಗೆ ಸಚಿನ್‌ ಈ ಸಾಧನೆ ಮೆರೆದರು. ಇದಕ್ಕೂ ಮುನ್ನ 5,396 ರನ್‌ ಬಾರಿಸಿದ್ದ ರೋಹನ್‌ ಪ್ರೇಮ್‌ ಹೆಸರಿನಲ್ಲಿ ಈ ದಾಖಲೆಯಿತ್ತು. ವಿಶೇಷವೆಂದರೆ ಲಿಸ್ಟ್‌ “ಎ’ (2826), ಟಿ20 (1781) ಸೇರಿ ಮೂರೂ ಮಾದರಿಗಳಲ್ಲೂ ಕೇರಳ ಪರ ಗರಿಷ್ಠ ರನ್‌ ಸರದಾರರಾಗಿ ಸಚಿನ್‌ ಗುರುತಿಸಿಕೊಂಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next