ಕೋಲ್ಕತಾ: ಪ್ಲೇ-ಆಫ್ ಆಸೆಯನ್ನು ಎಂದೋ ಕೈಬಿಟ್ಟಿರುವ ಎ ವಲಯದ ಹರ್ಯಾಣ ಸ್ಟೀಲರ್ ಮತ್ತು ಬಿ ವಲಯದ ತಮಿಳ್ ತಲೈವಾಸ್ ನಡುವಿನ ಪ್ರೊ ಕಬಡ್ಡಿ ಪಂದ್ಯ ಟೈ ಆಗಿದೆ. ಮಂಗಳವಾರ ನಡೆದ ಕೋಲ್ಕತಾ ಚರಣದ ಈ ಔಪಚಾರಿಕ ಅಂತರ್ ವಲಯ ಪಂದ್ಯ 40-40 ಅಂಕಗಳಿಂದ ಸಮಬಲಗೊಂಡಿದೆ. ಇತ್ತಂಡಗಳು ತಮ್ಮ ಕಡೆಯ ಪಂದ್ಯದಲ್ಲಿ ಗೆಲ್ಲಲು ವಿಫಲವಾಗಿ ನಿರಾಶೆ ಅನುಭವಿಸಿದವು. ಇವೆರಡೂ ತಂಡಗಳು ತಮ್ಮ ತಮ್ಮ ಗುಂಪಿನ ಕೊನೆಯ ಸ್ಥಾನದೊಂದಿಗೆ ಹೋರಾಟ ಮುಗಿಸಿದವು. ದಿನದ 2ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ 39-34 ಅಂತರದಿಂದ ತೆಲುಗು ಟೈಟಾನ್ಸ್‌ಗೆ ಸೋಲುಣಿಸಿತು.
ಸರಿಸಮ ಹೋರಾಟ
ಹರ್ಯಾಣದ ತಾರಾ ದಾಳಿಗಾರ ಮೋನು ಗೋಯತ್ ತಮ್ಮ ತಂಡದ ಪರ ಮಿಂಚು ಹರಿಸಿದರು. ಅಂತಿಮ ಪಂದ್ಯದಲ್ಲಿ 18 ಬಾರಿ ತಮಿಳುನಾಡು ಕೋಟೆಗೆ ಲಗ್ಗೆಯಿಟ್ಟ ಮೋನು, 17 ಅಂಕ ಗಳಿಸಿದರು. ಇದರಲ್ಲಿ 12 ಯಶಸ್ವಿ ದಾಳಿ ಮೂಲಕ 11 ಅಂಕ, ಬೋನಸ್ ರೂಪದಲ್ಲಿ 5 ಅಂಕ ಗಳಿಸಿದರು. ರಕ್ಷಣೆಯಲ್ಲಿ 1 ಅಂಕ ಸಂಪಾದಿಸಿದರು. ಇವರಿಗೆ ದಾಳಿಯಲ್ಲಿ ನೆರವು ನೀಡಿದ ವಿಕಾಸ್ ಖಂಡೋಲ 10 ಅಂಕ ಗಳಿಸಿದರು. ರಕ್ಷಣಾ ವಿಭಾಗದಲ್ಲಿ ಪ್ರವೀಣ್ ಮಿಂಚಿದರು.
ತಮಿಳ್ ತಲೈವಾಸ್ ಪರ ಖ್ಯಾತ ಆಟಗಾರ ಅಜಯ್ ಠಾಕೂರ್ 25 ಬಾರಿ ಹರ್ಯಾಣ ಕೋಟೆಯೊಳಗೆ ಪ್ರವೇಶಿಸಿ 15 ಅಂಕ ಗಳಿಸಿದರು. ಬೋನಸ್ ರೂಪದಲ್ಲಿ ಅವರಿಗೆ 2 ಅಂಕ ಲಭಿಸಿತು. ಇವರಿಗೆ ಆನಂದ್ ಬೆಂಬಲ ನೀಡಿ 8 ಅಂಕ ಗಳಿಸಿ ಕೊಟ್ಟರು. ಲೀಗ್‌ನ ಆರಂಭದಿಂದಲೇ ಕಳಪೆ ಪ್ರದರ್ಶನ ನೀಡುತ್ತ ಬಂದ ಈ ಎರಡು ತಂಡಗಳು, ಕಡೆಯ ವರೆಗೂ ಚೇತರಿಸಿಕೊಳ್ಳಲೇ ಇಲ್ಲ. ತಮ್ಮ ಪಾಲಿನ ಎಲ್ಲ 22 ಪಂದ್ಯಗಳನ್ನು ಎರಡೂ ತಂಡಗಳು ಮುಗಿಸಿವೆ.