ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಳಿ ಹುಲಿಯೊಂದು ಗುರುವಾರ ದಾರುಣವಾಗಿ ಸಾವನ್ನಪ್ಪಿದೆ. ಭಾನುವಾರ ಹುಲಿ-ಸಿಂಹ ಆವರಣದಲ್ಲಿ ರಾಯಲ್ ಬೆಂಗಾಲ್ ಹುಲಿಗಳ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಿಳಿ ಹುಲಿ ಶ್ರೇಯಸ್ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದೆ.
ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಸೇರಿರುವ ಸಫಾರಿ ಬಸ್ ಗಳು ಬಿಳಿ ಹುಲಿ ಸಫಾರಿ ಮುಗಿಸಿ, ರಾಯಲ್ ಬೆಂಗಾಲ್ ಹುಲಿಗಳ ಆವರಣಕ್ಕೆ ಹೋಗುವ ಸಮಯದಲ್ಲಿ ಬಿಳಿ ಹುಲಿಗಳು ಬೆಂಗಾಲ್ ಹುಲಿಗಳ ಆವರಣದೊಳಕ್ಕೆ ಪ್ರವೇಶಿಸಿದ್ದರಿಂದ ಬೆಂಗಾಲ್ ಹುಲಿಗಳಾದ ರಾಜ, ರಂಜಿತ್ , ರಾಜೇಂದ್ರ ಏಕಾಏಕಿ ಎರಡು ಬಿಳಿ ಹುಲಿಗಳ ಮೇಲೆ ದಾಳಿ ನಡೆಸಿದ್ದವು.
ಸಿಬ್ಬಂದಿ ಕೂಡಲೆ ಹುಲಿಗಳನ್ನು ಬೇರ್ಪಡಿಸಲು ಮುಂದಾಗಿ, ವಿನಯ್ ಎಂಬ ಬಿಳಿ ಹುಲಿಯನ್ನು ಸುರಕ್ಷಿತವಾಗಿ ಬಿಳಿ ಹುಲಿಗಳ ಆವರಣಕ್ಕೆ ಓಡಿಸಿದ್ದರು. ಅಷ್ಟರಲ್ಲಿ ಮತ್ತೂಂದು ಬಿಳಿ ಹುಲಿ, ಶ್ರೇಯಸ್‌ನ ಮೇಲೆ ಮೂರು ರಾಯಲ್ ಬೆಂಗಾಲ್ ಹುಲಿಗಳು ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿದ್ದವು.
ಕೂಡಲೆ, ಶ್ರೇಯಸ್ ಅನ್ನು ಕೂಡ ಸಿಬ್ಬಂದಿ ಸುರಕ್ಷಿತವಾಗಿ ಅದರ ಕೇಜ್‌ಗೆ ಸೇರಿಸಿದರಾದರೂ ತೀವ್ರವಾಗಿ ಗಾಯಗೊಂಡಿರುವ ಶ್ರೇಯಸ್ ಆಹಾರ ಸೇವಿಸುತ್ತಿರಲಿಲ್ಲ. ಬೆನ್ನು ಮೂಳೆಗೆ ಗಂಭೀರ ಸ್ವರೂಪದ ಪೆಟ್ಟಾಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
Video Courtesy: Lede World