ಕೋಲ್ಕತಾ: ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ 77 ಬಿಜೆಪಿ ಶಾಸಕರಿಗೆ ಕೇಂದ್ರ ಸರ್ಕಾರ ಭದ್ರತೆಯನ್ನು ನೀಡಿದ ಕೆಲವು ದಿನಗಳ ನಂತರ, ಕೇಂದ್ರ ಗೃಹಸಚಿವಾಲಯ ಸುವೇಂದು ಅಧಿಕಾರಿ ತಂದೆ, ಸಂಸದ ಸಿಸಿರ್ ಕುಮಾರ್ ಅಧಿಕಾರಿ ಹಾಗೂ ಸಹೋದರ ದಿಬ್ಯೇಂದು ಅಧಿಕಾರಿಗೆ ವೈ ಪ್ಲಸ್ ಭದ್ರತೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತದಲ್ಲಿ ಆಗಸ್ಟ್ ನಿಂದ ಸ್ಫುಟ್ನಿಕ್ ಲಸಿಕೆ ತಯಾರಿಕೆ; 850 ಮಿಲಿಯನ್ ಡೋಸ್ ಉತ್ಪಾದನೆ ಗುರಿ
ಕೇಂದ್ರ ಸರ್ಕಾರ ಭದ್ರತೆ ನೀಡಿರುವ ಕ್ರಮ ಪಶ್ಚಿಮಬಂಗಾಳದಲ್ಲಿ ರಾಜಕೀಯ ಸಂಘರ್ಷವನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಸಾಧ್ಯತೆ ಇದೆ. ಯಾಕೆಂದರೆ ಮಮತಾ ಬ್ಯಾನರ್ಜಿಯ ಕಟ್ಟಾ ಪ್ರತಿಸ್ಪರ್ಧಿ ಸುವೇಂದು ಅಧಿಕಾರಿ ತಂದೆ ಮತ್ತು ಕಿರಿಯ ಸಹೋದರನಿಗೆ ವೈ ಪ್ಲಸ್ ನೀಡಿರುವುದು ಕಾರಣ ಎಂದು ವರದಿ ವಿಶ್ಲೇಷಿಸಿದೆ.
ಮಮತಾ ಸಂಪುಟದಲ್ಲಿ ಸಚಿವರಾಗಿ, ಆಪ್ತರಾಗಿದ್ದ ಸುವೇಂದು ಅಧಿಕಾರಿ ಬಂಡಾಯ ಎದ್ದು ಟಿಎಂಸಿ ತೊರೆದು ಬಿಜೆಪಿಯಿಂದ ನಂದಿಗ್ರಾಮದಲ್ಲಿ ಸ್ಪರ್ಧಿಸಿ ಮಮತಾ ಬ್ಯಾನರ್ಜಿ ಅವರನ್ನೇ 1,200 ಮತಗಳಿಂದ ಪರಾಜಯಗೊಳಿಸಿದ್ದರು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಿತ್ತು.
ಸುವೇಂದು ಅಧಿಕಾರಿಗೆ ಸಿಆರ್ ಪಿಎಫ್ ನ ವೈ ಪ್ಲಸ್ ಕೆಟಗರಿಯ ಭದ್ರತೆ ನೀಡಲಾಗಿದೆ. ಇದರೊಂದಿಗೆ ಸುವೇಂದು ಅಧಿಕಾರಿ ಅವರನ್ನು ಪರ್ಸನಲ್ ಸೆಕ್ಯುರಿಟಿ, 11 ಮಂದಿ ಶಸ್ತ್ರಸಜ್ಜಿತ ಪೊಲೀಸರು, ಕಮಾಂಡೋಗಳು ಸೇರಿದಂತೆ ವೈಪ್ಲಸ್ ಭದ್ರತೆ ಜಾರಿಯಲ್ಲಿರುತ್ತದೆ.