Advertisement

ಬರಡು ರಾಸುಗಳಿಗೂ ಬಂಜೆತನ ನಿವಾರಣೆ ಭಾಗ್ಯ!

09:34 AM Jul 21, 2017 | |

ಬೀದರ: ಕಸಾಯಿಖಾನೆಗೆ ತಳ್ಳಲಾಗುತ್ತಿದ್ದ ಬರಡು ಜಾನುವಾರುಗಳಿಗೂ ಕೃತಕ ಗರ್ಭಧಾರಣೆ ಮಾಡಿ ಬಂಜೆತನ ನಿವಾರಿಸಿರುವ ಪ್ರಯೋಗ ಗಡಿ ಜಿಲ್ಲೆ ಬೀದರನಲ್ಲಿ ಯಶಸ್ಸು ಕಂಡಿದೆ. ಸಿಐಡಿಆರ್‌ (ಕಂಟ್ರೋಲ್‌ ಇಂಟರ್‌ನಲ್‌ ಡ್ರಗ್‌ ರಿಲೀಸ್ಡ್) ಚಿಕಿತ್ಸೆಯಿಂದ ಜಿಲ್ಲೆಯಲ್ಲಿ 227 ಬರಡು ರಾಸುಗಳು ಇದೀಗ ಗರ್ಭ ಧರಿಸಿದ್ದು, ಒಂದೆರಡು ತಿಂಗಳಲ್ಲಿ ಕರು ಹಾಕಲಿವೆ.

Advertisement

ಬರಡು ರಾಸುಗಳು ಅನುತ್ಪಾದಕವಾಗಿರುವ ಕಾರಣ ಅವುಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಬಯಸದ ರೈತರು ಕಸಾಯಿಖಾನೆಗೆ ಸಾಗಿಸುತ್ತಾರೆ. ಇಂಥ ಜಾನುವಾರುಗಳನ್ನೂ ಸಿಐಡಿಆರ್‌ ಚಿಕಿತ್ಸಾ ತಂತ್ರ ಜ್ಞಾನದ ಮೂಲಕ ಬೆದೆಗೆ ತಂದು, ಅವುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಲಾಗಿದೆ. ಆ ಮೂಲಕ ಹಾಲು ಉತ್ಪಾದನೆ ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ ವರ್ಷದಲ್ಲಿ ಬೀದರನಲ್ಲಿ ಪ್ರಯೋಗ ಪ್ರಾರಂಭಿಸಲಾಗಿತ್ತು. ಇಲ್ಲಿ ಯಶಸ್ವಿಯಾದರೆ ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ನಿರ್ಧರಿಸಿತ್ತು. 

ವರವಾದ ಸಿಐಡಿಆರ್‌ ಚಿಕಿತ್ಸೆ: ದೇಹದಲ್ಲಿ ಪೌಷ್ಟಿಕಾಂಶ- ಖನಿಜದ ಕೊರತೆ, ವಾತಾವರಣದಲ್ಲಿ ಬದಲಾವಣೆ ಮತ್ತು ರೋಗಗಳಿಂದ ಜಾನುವಾರುಗಳಲ್ಲಿ ಬರಡುತನ ಹೆಚ್ಚುತ್ತಿದೆ. ದೇಶದಲ್ಲಿ ಈವರೆಗೆ ಫಲವತ್ತತೆ ಇರುವ ರಾಸುಗಳಿಗೆ ಮಾತ್ರ ಕೃತಕ ಗರ್ಭಧಾರಣೆ ವ್ಯವಸ್ಥೆ ಇತ್ತು. ಆದರೆ, ಸಿಐಡಿಆರ್‌ ಚಿಕಿತ್ಸೆ ಮೂಲಕ ಬರಡು ರಾಸುಗಳೂ ಗರ್ಭ ಧರಿಸಬಹುದು ಎಂಬುದನ್ನು ಮನಗಂಡ ಸರ್ಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಿಐಡಿಆರ್‌ ಚಿಕಿತ್ಸೆ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆಯಿಂದ ಪಶು ವೈದ್ಯಕೀಯ ಮಹಾವಿದ್ಯಾಲಯದ ನೆರವಿ ನೊಂದಿಗೆ ಬಂಜೆತನ ನಿವಾರಣೆ (ಸಿಐಡಿಆರ್‌) ಕಾರ್ಯಕ್ರಮ ಜಾರಿಗೊಳಿಸಲಾಗಿದ್ದು, ಪಶು ವಿವಿ ವಿಜ್ಞಾನಿಗಳ ಮೂಲಕ ಇಲ್ಲಿನ ಪಶು ವೈದ್ಯಾ ಧಿಕಾರಿಗಳು, ಪರೀಕ್ಷಕರು ಮತ್ತು ಕೃತಕ ಗರ್ಭಧಾರಣ ತಂತ್ರಜ್ಞರಿಗೆ ಸಿಐಡಿಆರ್‌ ಚಿಕಿತ್ಸಾ ವಿಧಾನ, ಕೃತಕ ಗರ್ಭಧಾರಣೆ ಕುರಿತು ತರಬೇತಿ ಕಲ್ಪಿಸಲಾಗಿದೆ.

ಬೀದರ್‌ ಜಿಲ್ಲೆಯೇ ಏಕೆ?: ಸಮೀಕ್ಷೆ ಪ್ರಕಾರ ಬೀದರ್‌ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಬರಡು ಜಾನುವಾರುಗಳಿವೆ. ಜಿಲ್ಲೆಯಲ್ಲಿ 2012ರ ಗಣತಿ ಪ್ರಕಾರ 2,35,294 ದನ ಮತ್ತು 1,30,611 ಎಮ್ಮೆಗಳಿದ್ದು, ಇದರಲ್ಲಿ ಶೇ. 35-40ರಷ್ಟು ಬರಡು ಜಾನುವಾರುಗಳಿವೆ. ಇಂಥ ಜಾನುವಾರುಗಳು ಕೃತಕ ಗರ್ಭಧಾರಣೆ ಹೊಂದು ವಂತೆ ಮಾಡಲು, ಸಿಐಡಿಆರ್‌ ಚಿಕಿತ್ಸೆ ಕಾರ್ಯಕ್ರಮ
ಜಾರಿಗಾಗಿ ಪಶು ಮಹಾವಿದ್ಯಾಲಯ ಮತ್ತು ಪಶು ಇಲಾಖೆ ಜಂಟಿಯಾಗಿ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಇದಕ್ಕೆ 2016ರ ಜನವರಿಯಲ್ಲಿ ಯೋಜನೆಗೆ ಅನುಮೋದನೆ ನೀಡಿ, ಒಂದು ಕೋಟಿ ರೂ. ಬಿಡುಗಡೆ ಮಾಡಿತ್ತು. ಪಶು
ಅಧಿ ಕಾರಿಗಳ ಪ್ರಕಾರ ಸಿಐಡಿಆರ್‌ ಚಿಕಿತ್ಸಾ ವಿಧಾನ ಅಳವಡಿಕೆಯಿಂದ ಶೇ.70ಕ್ಕಿಂತ ಹೆಚ್ಚು ರಾಸುಗಳು ಕೃತಕ ಗರ್ಭ ಧರಿಸಿ ಕರುಗಳಿಗೆ ಜನ್ಮ ನೀಡಬಹುದು. ಈಗ ಜಿಲ್ಲೆಯಲ್ಲಿ ಗರ್ಭ ಧರಿಸಿರುವ ರಾಸುಗಳು ಒಂದೆರಡು ತಿಂಗಳಲ್ಲಿ ಕರು ಹಾಕುವ ಸಾಧ್ಯತೆ ಇದೆ.

ಬೀದರ್‌ ಜಿಲ್ಲೆಯಲ್ಲಿ ಬರಡು ಜಾನುವಾರುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅವುಗಳನ್ನು ಬೆದೆಗೆ ಬರುವಂತೆ ಮಾಡಲು ಸಿಐಡಿಆರ್‌ ಚಿಕಿತ್ಸಾ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗಿದ್ದು, ಯಶಸ್ಸು ಕಾಣುತ್ತಿದ್ದೇವೆ. ಜಿಲ್ಲೆಯಲ್ಲಿ 5 ಸಾವಿರ ಬರಡು ರಾಸುಗಳಿಗೆ ಚಿಕಿತ್ಸೆ ಕಲ್ಪಿಸುವ ಗುರಿ ಇದ್ದು, ಈ ಪ್ರಯೋಗ ಇನ್ನೂ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಇದು ಮೊದಲ ಪ್ರಯೋಗ. 
ಡಾ| ಡಿ.ಎಸ್‌. ಹವಾಲ್ದಾರ್‌, ಉಪ ನಿರ್ದೇಶಕರು, ಪಶು ಪಾಲನಾ ಮತ್ತು ಪಶು ವೈದ್ಯ ಇಲಾಖೆ, ಬೀದರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next