ಜನನ ಸಮಯದಿಂದಲೂ ತಾಯಿಯ ಎದೆಹಾಲು ನವಜಾತ ಶಿಶುವಿಗೆ ಅತ್ಯುತ್ತಮವಾದ ಆಹಾರವಾಗಿದೆ. ಅನೇಕ ಕಾರಣಗಳಿಂದ ಇದು ನಿಜ ಎಂಬುದು ಸಾಬೀತಾಗಿದೆ. ಇಂತಹ ಕಾರಣಗಳಲ್ಲಿ ಒಂದು ಎಂದರೆ, ಶಿಶುವಿನ ರೋಗ ನಿರೋಧಕ ಶಕ್ತಿಯ ಬಲವರ್ಧನೆಗೆ ಸ್ತನ್ಯಪಾನವು ಪ್ರಯೋಜನಕಾರಿಯಾಗಿದೆ.
ನವಜಾತ ಶಿಶು ಅದುವರೆಗೆ ಸಂಪೂರ್ಣ ಸೋಂಕುರಹಿತ ಮತ್ತು ಸುರಕ್ಷಿತವಾದ ವಾತಾವರಣದಲ್ಲಿ ಇದ್ದುದು ಅಸಂಖ್ಯ ಸೂಕ್ಷ್ಮ ಜೀವಿಗಳು ತುಂಬಿ ತುಳುಕುತ್ತಿರುವ ಬಾಹ್ಯ ಪ್ರಪಂಚಕ್ಕೆ ಕಾಲಿರಿಸುತ್ತದೆ. ಇಂತಹ ಸೂಕ್ಷ್ಮಜೀವಿಗಳಲ್ಲಿ ಸರಳ ಬ್ಯಾಕ್ಟೀರಿಯಾಗಳಿಂದ ಹಿಡಿದು ಔಷಧ ಪ್ರತಿರೋಧ ಗುಣ ಬೆಳೆಸಿಕೊಂಡಿರುವ ಬ್ಯಾಕ್ಟಿರಿಯಾಗಳು, ವೈರಾಣುಗಳು, ಶಿಲೀಂಧ್ರಗಳು ಮತ್ತು ಪರೋಪಜೀವಿಗಳ ಸಹಿತ ಎಲ್ಲವೂ ಇರುತ್ತವೆ.
ಇದರ ಜತೆಗೆ ನವಜಾತ ಶಿಶುವಿನ ರೋಗ ನಿರೋಧಕ ಶಕ್ತಿಯು ದುರ್ಬಲ ಮತ್ತು ಹೊಸದಾಗಿದ್ದು, ಅನೇಕ ಸೋಂಕುಗಳ ಸ್ಮರಣೆಯನ್ನು ಇನ್ನಷ್ಟೇ ಬೆಳೆಸಿಕೊಳ್ಳಬೇಕಾಗಿರುತ್ತದೆ. ಈ ಸಮಯದಲ್ಲಿ ಲಘು ಮತ್ತು ತೀವ್ರ ಸ್ವರೂಪದವುಗಳ ಸಹಿತ ವಿವಿಧ ಬಗೆಯ ಸೋಂಕುಗಳಿಗೆ ಶಿಶು ತುತ್ತಾಗುವ ಸಾಧ್ಯತೆಗಳಿರುತ್ತವೆ. ಜನನವಾದ 30 ನಿಮಿಷಗಳ ಬಳಿಕದಿಂದ ಆರಂಭಿಸಿ ಸಾಧ್ಯವಾದಷ್ಟು ಬೇಗನೆ ಎದೆಹಾಲು ಉಣಿಸುವುದನ್ನು ಆರಂಭಿಸುವುದರಿಂದ ಶಿಶುವಿನ ಜೀರ್ಣಾಂಗವ್ಯೂಹವು ತಾಯಿಯ ಎದೆಹಾಲಿನಿಂದ ತುಂಬಿಕೊಳ್ಳುತ್ತದೆ. ತಾಯಿಯ ಎದೆಹಾಲಿನಲ್ಲಿ ಸೆಕ್ರೆಟರಿ ಐಜಿಎ (ಇಮ್ಯುನೊಗ್ಲೊಬ್ಯುಲಿನ್ ಎ) ಎಂಬ ರೋಗ ಪ್ರತಿಕಾಯಗಳು ಸಮೃದ್ಧವಾಗಿರುತ್ತವೆ.
ಈ ಐಜಿಎಯು ಶಿಶುವಿನ ಜೀರ್ಣಾಂಗ ವ್ಯೂಹವನ್ನು ಪ್ರವೇಶಿಸಬಹುದಾದ ಯಾವುದೇ ಸೂಕ್ಷ್ಮಜೀವಿಗಳಿಗೆ ಬೆಸೆದುಕೊಳ್ಳುವ ಮೂಲಕ ಅವು ಶಿಶುವಿನ ದೇಹ ಪ್ರವೇಶ ಮಾಡುವುದನ್ನು ತಡೆಯುತ್ತವೆ. ತಾಯಿಯ ಸ್ತನ್ಯದಲ್ಲಿ ಐಜಿಜಿ, ಐಜಿಎಂನಂತಹ ಇತರ ಪ್ರತಿಕಾಯಗಳು ಕೂಡ ಇರುತ್ತವೆ. ಈ ಪ್ರತಿಕಾಯಗಳು ಶಿಶುವಿನ ರಕ್ತಪ್ರವಾಹದಲ್ಲಿ ಸೇರಿಕೊಂಡು ರಕ್ತಪ್ರವಾಹವನ್ನು ಪ್ರವೇಶಿಸಬಹುದಾದ ಬ್ಯಾಕ್ಟೀರಿಯಾ ಮತ್ತು ವೈರಾಣುಗಳನ್ನು ನಿಗ್ರಹಿಸುತ್ತವೆ. ತಾಯಿಯ ಎದೆಹಾಲಿನಲ್ಲಿ ಹ್ಯೂಮನ್ ಮಿಲ್ಕ್ ಓಲಿಗೊಸ್ಯಾಚರೈಡ್ಸ್ ಅಥವಾ ಬೈಫಿಡಸ್ ಫ್ಯಾಕ್ಟರ್ ಎಂದು ಕರೆಯಲ್ಪಡುವ ನಿರ್ದಿಷ್ಟ ಪ್ರೊಬಯಾಟಿಕ್ ಸಂಯುಕ್ತಗಳು ಕೂಡ ಇರುತ್ತವೆ. ಈ ನಿರ್ದಿಷ್ಟ ಪ್ರೊಬಯಾಟಿಕ್ ಸಂಯುಕ್ತಗಳು ಶಿಶುವನ್ನು ಅಲರ್ಜಿಗಳು, ಅಸ್ತಮಾ ಮತ್ತು ಬೊಜ್ಜಿನಂತಹ ದೀರ್ಘಕಾಲೀನ ಕಾಯಿಲೆಗಳಿಂದ ಬೈಫಿಡೊಬ್ಯಾಕ್ಟೀರಿಯಂ ಎಂಬ ಬ್ಯಾಕ್ಟೀರಿಯಂನ ಬೆಳವಣಿಗೆ ಮತ್ತು ಸ್ಥಾಪನೆ ಆದ್ಯತೆಯಲ್ಲಿ ನಡೆಯಲು ಸಹಾಯ ಮಾಡುತ್ತದೆ. ಆದ್ದರಿಂದ ಎದೆಹಾಲು ಉಣ್ಣುವ ಶಿಶುಗಳ ಕರುಳಿನಲ್ಲಿ ಆರೋಗ್ಯ ಪ್ರಯೋಜನಕಾರಿ ಸೂಕ್ಷ್ಮಜೀವಿ ವ್ಯವಸ್ಥೆಯ ಸ್ಥಾಪನೆಗೆ ಇದು ತಳಹದಿಯಾಗುತ್ತದೆ. ಆದರೆ ಫಾರ್ಮುಲಾ ಆಹಾರವನ್ನು ಸೇವಿಸುವಶಿಶುಗಳಲ್ಲಿ ಇದು ಆಗುವುದಿಲ್ಲ.
ಎದೆಹಾಲಿನಲ್ಲಿ ಸೈಟೊಕಿನ್‌ಗಳು/ ಕಿಮೊಕಿನ್ ಗಳು, ಲಿಪಿಡ್‌ಗಳು, ಹಾರ್ಮೋನ್‌ಗಳು ಮತ್ತು ಕಿಣ್ವಗಳ ಸಹಿತ ನಾನ್ ಇಮ್ಯೂನ್ ಮತ್ತು ಇಮ್ಯೂನ್ ಜೀವಕೋಶಗಳು, ಬಯೋಆ್ಯಕ್ಟಿವ್ ಮಾಲೆಕ್ಯೂಲ್ ಗಳು ಇದ್ದು, ಇವು ಶಿಶುಗಳಿಗೆ ರೋಗಗಳಿಂದ ರಕ್ಷಣೆ ಮತ್ತು ರೋಗ ನಿರೋಧಕ ವ್ಯವಸ್ಥೆಯ ಬೆಳವಣಿಗೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತವೆ. ಲಿಂಫೊಸೈಟ್ ಗಳು, ಮ್ಯಾಕ್ರೊಫೇಜಸ್ ಮತ್ತು ಗ್ರಾನ್ಯುಲೊಸೈಟ್‌ಗಳು ಎಂಬ ಜೀವಕೋಶಗಳು ಕೂಡ ಎದೆಹಾಲಿನಲ್ಲಿದ್ದು, ಶಿಶುವಿನ ರೋಗ ನಿರೋಧ ವ್ಯವಸ್ಥೆಯು ಸದೃಢ ಮತ್ತು ಸಶಕ್ತಗೊಳ್ಳಲು ಸಹಾಯ ಮಾಡುತ್ತವೆಯಲ್ಲದೆ ದೀರ್ಘಕಾಲೀನ ರೋಗಗಳು ಮತ್ತು ಬೊಜ್ಜು ಉಂಟಾಗುವುದನ್ನು ತಡೆಯುತ್ತವೆ. ಎದೆಹಾಲಿನಲ್ಲಿ ಇರುವ ಬಯೋಆ್ಯಕ್ಟಿವ್ ಸಂಯುಕ್ತಗಳು ಎದೆಹಾಲು ಉಣ್ಣುವ ಶಿಶುಗಳಲ್ಲಿ ಸಮರ್ಪಕವಾದ ಉರಿಯೂತ ಪ್ರಕ್ರಿಯೆಯ ರೂಪೀಕರಣದಲ್ಲಿ ಭಾಗಿಯಾಗುತ್ತವೆ. ಇಂತಹ ಸಂಯುಕ್ತಗಳಲ್ಲಿ ಒಂದಾಗಿರುವ ಲ್ಯಾಕ್ಟೊಫೆರಿನ್ ಎದೆಹಾಲಿನಲ್ಲಿ ಇರುವ ಕಬ್ಬಿಣದ ಅಂಶವನ್ನು ದೇಹವು ಪಡೆಯಲು ಮತ್ತು ಅದು ಶಿಶುವಿಗೆ ಜೈವಿಕವಾಗಿ ಲಭ್ಯವಾಗುವಂತೆ ಮಾಡುತ್ತದೆ. ಕಬ್ಬಿಣದ ಅಂಶ ನಷ್ಟಕ್ಕೆ ಕಾರಣವಾಗಬಲ್ಲ ಬ್ಯಾಕ್ಟೀರಿಯಾಗಳನ್ನು ಶಿಶುವಿನ ಕರುಳಿನಿಂದ ನಿರ್ಮೂಲನಗೊಳಿಸುವುದಕ್ಕೂ ಇದು ಸಹಾಯ ಮಾಡುತ್ತದೆ. ಎದೆಹಾಲು ಸೇವಿಸುವ ಮೂಲಕ ತಾಯಿಯಿಂದ ಬರುವ ರೋಗ ಪ್ರತಿಕಾಯಗಳು, ವಂಶಪಾರಂಪರ್ಯವಲ್ಲದ ತಾಯಿಯ ರೋಗಪ್ರತಿಕಾಯಗಳು ಮತ್ತು ತಾಯಿಯ ಲ್ಯುಕೊಸೈಟ್‌ಗಳು ಕೂಡ ಶಿಶುವಿನ ಹೊಟ್ಟೆ ಮತ್ತು ಕರುಳನ್ನು ಪ್ರವೇಶಿಸುತ್ತವೆ. ಜತೆಗೆ, ತಾಯಿಯ ರೋಗ ಪ್ರತಿಕಾಯಗಳು ಮತ್ತು ಆಕರ ಕೋಶಗಳು ನವಜಾತ ಶಿಶುವಿನ ರಕ್ತಪ್ರವಾಹವನ್ನು ಆಕ್ರಮಿಸಿಕೊಳ್ಳುವ ಮೂಲಕ ತಾಯಿಯಿಂದ ಪಡೆದ ಮೈಕ್ರೊ-ಕಿಮೆರಿಸಂ ಉಂಟಾಗಲು ಮತ್ತು ರೋಗ ನಿರೋಧಕ ಶಕ್ತಿ ಸಹಿಷ್ಣುತೆ ಬೆಳೆಯುವಂತೆ ಮಾಡುತ್ತವೆ.
ಅಂತಿಮವಾಗಿ, ತಾಯಿಯ ಎದೆಹಾಲು ಮೈಕ್ರೊಬಯೋಟಾ, ಎಂಆರ್‌ಎನ್‌ಎ ಐ ಮತ್ತು ಎಕೊÕಸೋಮ್‌ಗಳನ್ನು ಕೂಡ ಹೊಂದಿದ್ದು, ಇವು ಶಿಶುವಿನ ಕರುಳಿನಲ್ಲಿ ಟಿ-ಸೆಲ್ ಶೇಖರಣೆಯಾಗುವಂತೆ ಮಾಡುವ ಮೂಲಕ ರೋಗ ನಿರೋಧಕ ಶಕ್ತಿಯು ಸದೃಢಗೊಂಡು ಸೋಂಕುಗಳಿಗೆ ತುತ್ತಾಗದಂತೆ ತಡೆಯುತ್ತವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ, ತಾಯಿಯ ಆರೋಗ್ಯ ಮತ್ತು ಆಕೆಯ ಆಹಾರ ಕ್ರಮ. ತಾಯಿಯ ದೇಹತೂಕ, ವಯಸ್ಸು, ಜೀವನಶೈಲಿ ಮತ್ತು ಆಹಾರ ಕ್ರಮದ ಗುಣಮಟ್ಟಗಳು ಎದೆಹಾಲಿನಲ್ಲಿ ಇರುವ ಅಂಶಗಳಾದ ಲಿಪಿಡ್ ಪ್ರಭೇದಗಳು, ಮೈಕ್ರೊಬಯೋಟಾ, ಸೈಟೊಕಿನ್‌ಗಳು ಮತ್ತು ರೋಗ ಪ್ರತಿಕಾಯ ವಿಧಗಳ ಸಂಗ್ರಹಣೆಯ ಮೇಲೆ ಪ್ರಭಾವ ಬೀರುತ್ತವೆ. ಹೆಚ್ಚು ಕೊಬ್ಬು, ಕಾಬೊìಹೈಡ್ರೇಟ್ ಸಮೃದ್ಧ ಆಹಾರಗಳನ್ನು ತಾಯಿ ಸೇವಿಸಿದರೆ ಶಿಶುವಿನಲ್ಲಿ ರೋಗಕಾರಕ ಬ್ಯಾಕ್ಟೀರಿಯಾಗಳ ಪ್ರವರ್ಧನೆಯಾಗಿ ಮೈಕ್ರೊಬಯೋಟಾ ಸಂರಚನೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಅದೇ ಹೆಚ್ಚು ನಾರಿನಂಶ, ಪ್ರೊಟೀನ್ ಮತ್ತು ಮಿತ ಪ್ರಮಾಣದಲ್ಲಿ ಕಾಬೊìಹೈಡ್ರೇಟ್ ಹೊಂದಿರುವ ಆಹಾರ ಕ್ರಮವನ್ನು ಪಾಲಿಸುವುದರಿಂದ ಶಿಶುವಿನ ಕರುಳಿನಲ್ಲಿ ಲ್ಯಾಕ್ಟೊಬೆಸಿಲಸ್ ಮೈಕ್ರೊಬಯೋಟಾ ರೂಪುಗೊಳ್ಳುತ್ತದೆ.
ಈ ಎಲ್ಲ ಕಾರಣಗಳಿಂದ ನವಜಾತ ಶಿಶುವಿನ ರೋಗ ನಿರೋಧಕ ಶಕ್ತಿಯು ಬಾಹ್ಯ ವಾತಾವರಣದಲ್ಲಿ ಇರುವ ಸೂಕ್ಷ್ಮ ಜೀವಿಗಳ ಆಕ್ರಮಣವನ್ನು ಎದುರಿಸುವಷ್ಟು ಶಕ್ತಿಶಾಲಿಯಾಗಿ ಬೆಳವಣಿಗೆ ಹೊಂದುವವರೆಗೆ ತಾಯಿಯ ಎದೆಹಾಲು ಉಣಿಸುವುದರಿಂದ ಶಿಶುವಿಗೆ ಸೂಕ್ತ ರಕ್ಷಣೆ ದೊರಕುತ್ತದೆ. ಆದ್ದರಿಂದಲೇ ಜನನವಾದ ಬಳಿಕ 2 ವರ್ಷಗಳ ವರೆಗೆ ಎದೆಹಾಲು ಉಣಿಸುವುದರಿಂದ ಶಿಶುವಿನ ದೇಹದಲ್ಲಿ ರೋಗಪ್ರತಿರೋಧಕ ವ್ಯವಸ್ಥೆಯ ಬೆಳವಣಿಗೆ ಸಮರ್ಪಕವಾಗಿ ನಡೆಯುತ್ತದೆ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ:ಮುಖ್ಯಸ್ಥರು, ಒಬಿಜಿ ಮತ್ತು ಪೀಡಿಯಾಟ್ರಿಕ್ಸ್ ವಿಭಾಗ,ಕೆಎಂಸಿ, ಮಂಗಳೂರು
-ಡಾ| ಸೌಂದರ್ಯಾ ಎಂ. ಪೀಡಿಯಾಟ್ರಿಶನ್ ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು