Advertisement
ಮಾಗಡಿ ತಾಲೂಕಿನ ಕೃಷಿ ಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ರೈತರೊಂದಿಗಿನ ನೇರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಧಾನಿಗಳು ಮಾತನಾಡಿದರು. ದೇಶದಲ್ಲಿ ಹಸಿರು ಕ್ರಾಂತಿಯಾಗಬೇಕು. ರೈತರ ಬದುಕು ಹಸನಾಗಬೇಕು. ಉನ್ನತ ಶಿಕ್ಷಣ ಪಡೆದ ಯುವಕ, ಯುವತಿಯರು ಕೃಷಿ ಚಟುವಟಿಕೆಯತ್ತ ಮುಖ ಮಾಡಿರುವುದು ದೇಶದ ಪ್ರಗತಿಗೆ ನಾಂದಿ. ಇವರು ಇತರ ರೈತರಿಗೂ ಮಾರ್ಗದರ್ಶಿಯಾಗಿದ್ದಾರೆ ಎಂದರು. ರೈತರಿಗಾಗಿ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಅದರಲ್ಲೂ ಫಸಲ್ ಬೀಮಾ ಯೋಜನೆ ಜನಪ್ರಿಯಗೊಂಡಿದ್ದು, ಅದನ್ನು ರೈತರು ಸಮರ್ಪಕವಾಗಿ ಬಳಸಿಕೊಂಡು, ಆರ್ಥಿಕವಾಗಿ ಮುಂದೆ ಬರಬೇಕು. ಇದರಿಂದ ದೇಶದ ಆಹಾರ ಭದ್ರತೆಗೂ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
Related Articles
11 ಜೋನ್‌ಗಳಲ್ಲಿ ರಾಜ್ಯದ ರಾಮನಗರ ಜಿಲ್ಲೆಯನ್ನು ಪ್ರಧಾನಿ ಮೋದಿ ಆಯ್ಕೆ ಮಾಡಿಕೊಂಡಿದ್ದು, ಕೃಷಿ ಜ್ಞಾನ ಕೇಂದ್ರದ ವಿಜ್ಞಾನಿಗಳ ಕಾರ್ಯವೈಖರಿ, ವಿವಿಧ ತಳಿಗಳ ವಸ್ತು ಪ್ರದರ್ಶನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮಧ್ಯೆ, ಆಯ್ದ ರೈತರಿಗೆ ಮಾತ್ರ ಅವಕಾಶ ನೀಡಿದ್ದರಿಂದ ಬಹುತೇಕ ಪ್ರಗತಿಪರ ರೈತರು ಈ ಕಾರ್ಯಕ್ರಮದಿಂದ ವಂಚಿತರಾಗಿದ್ದು, ಬೇಸರ ವ್ಯಕ್ತಪಡಿಸಿದರು.
Advertisement
2022ರ ವೇಳೆಗೆ ಕೃಷಿ ಆದಾಯ ದುಪ್ಪಟ್ಟಿಗೆ ಕ್ರಮನವದೆಹಲಿ: 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಜತೆಗೆ, ಕೃಷಿ ವಲಯದ ಬಜೆಟ್ ಅನ್ನೂ 2.12 ಲಕ್ಷ ಕೋಟಿಗೆ ಏರಿಕೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಫಲಾನುಭವಿ ರೈತರ ಜತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂವಾದ ನಡೆಸಿದ ಮೋದಿ ಅವರು, ಎನ್‌ಡಿಎ ಸರ್ಕಾರ ರೈತರಿಗಾಗಿ ತಂದಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಸರ್ಕಾರವು ರೈತರ ಪರವಾಗಿ ಅತ್ಯಂತ ಉತ್ಕೃಷ್ಟ ಮತ್ತು ಸಮತೋಲಿತ ನೀತಿಗಳನ್ನು ತಂದಿದ್ದು, ಈ ಮೂಲಕ ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ, ನೀರು ಮತ್ತು ವಿದ್ಯುತ್ ಅನ್ನು ನೀಡಲು ಕ್ರಮ ತೆಗೆದುಕೊಂಡಿದೆ. ಜತೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಗಣನೀಯ ಪಾತ್ರ ವಹಿಸಿದೆ ಎಂದರು. ನಾವು ಈ ಹಿಂದೆಯೇ ರೈತರ ಆದಾಯವನ್ನು 2022ರ ವೇಳೆಗೆ ಡಬಲ್ ಮಾಡುತ್ತೇವೆ ಎಂದಿದ್ದೆವು. ಆದರೆ, ಆಗ ಎಲ್ಲರೂ ಹಾಸ್ಯ ಮಾಡಿದ್ದರು. ಈಗ ನಾವು ರೈತರ ಅಭಿವೃದ್ಧಿಗೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. 2022ರ ವೇಳೆಗೆ ಆದಾಯ ದುಪ್ಪಟ್ಟು ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು. ಜತೆಗೆ ಇದಕ್ಕಾಗಿ ಸರ್ಕಾರವು ನಾಲ್ಕು ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ. ಅಂದರೆ, ಉತ್ಪಾದನಾ ವೆಚ್ಚ ತಗ್ಗಿಸುವುದು, ಬೆಳೆಗೆ ನ್ಯಾಯೋಚಿತ ಬೆಲೆ ನೀಡುವುದು, ಬೆಳೆ ಬಂದ ನಂತರ ಆಗುತ್ತಿರುವ ಹಾನಿ ತಪ್ಪಿಸುವುದು ಮತ್ತು ಆದಾಯಕ್ಕೆ ಪರ್ಯಾಯ ಮಾರ್ಗ ಹುಡುಕುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಕಳೆದ ಬಜೆಟ್‌ನಲ್ಲಿ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು ಒಂದುವರೆ ಪಟ್ಟು ಹೆಚ್ಚಿಸಲಾಗಿದೆ. ಇದಕ್ಕೆ ಎಲ್ಲಾ ರೀತಿಯ ವೆಚ್ಚಗಳನ್ನೂ ಸೇರಿಸಲಾಗಿದೆ. ಸರ್ಕಾರವು ಕೃಷಿ ಜತೆಗೆ ಮೀನುಗಾರಿಕೆ, ಹೈನು ಮತ್ತು ಜೇನು ಸಾಕಣೆಯಂಥ ಉಪಕಸುಬುಗಳಿಗೂ ಆದ್ಯತೆ ನೀಡಿದೆ. ಅಲ್ಲದೆ ಕಳೆದ 4 ವರ್ಷಗಳಲ್ಲಿ ರೈತರ ಅನುಕೂಲಕ್ಕಾಗಿ 500 ರೈತರ ಉತ್ಪಾದಕ ಸಂಘಗಳನ್ನು ಸ್ಥಾಪಿಸಲಾಗಿದೆ. 12.5 ಕೋಟಿ ರೈತರಿಗೆ ಮಣ್ಣಿನ ಪರೀಕ್ಷಾ ಕಾರ್ಡ್ ನೀಡಲಾಗಿದೆ ಎಂದೂ ಪ್ರಧಾನಿ ಹೇಳಿದರು.